ಹರಿದ್ವಾರ

 ಹಿಮಾಲಯ ಪ್ರವಾಸ ಹೋಗಬೇಕೆನ್ನುವ  ಆಸೆ ಬಹಳ ವರ್ಷಗಳದ್ದು , 2013 ರಲ್ಲಿ ಅಮರನಾಥಯಾತ್ರೆಯ ಯೋಜನೆ ಕೊನೆಯ ಹಂತದಲ್ಲಿ ರದ್ದಾಗಿತ್ತು. ಈ ಸಲ ಪುಷ್ಪಗಳ ಕಣಿವೆಗೆ (Valley of Flowers) ಹೋಗಬೇಕೆನ್ನುವ ಯೋಜನೆ ಆರಂಭವಾಯಿತು, ನಂತರ ಅದಕ್ಕೆ ಹೇಮಕುಂಡ್ ಸಾಹಿಬ್ , ಕೇದಾರನಾಥ್ ಮತ್ತು ಬದರೀನಾಥ್ ಕ್ಷೇತ್ರಗಳು ಸೇರ್ಪಡೆಯಾದವು ಕೊನೆಗೆ ಸಮಯದ ಅಭಾವದಿಂದ ಕೇದಾರನಾಥ್ ಮತ್ತು ಬದರೀನಾಥ್ ಕ್ಷೇತ್ರಗಳು ಮಾತ್ರ ಪಟ್ಟಿಯಲ್ಲಿ ಉಳಿದವು. (ಪುಷ್ಪಗಳ ಕಣಿವೆಗೆ ಹೋಗಬೇಕೆನ್ನುವ ಆಸೆ ಹಾಗೆ ಉಳಿಯಿತು) ಅದರಂತೆ ಮೊದಲು ಹರಿದ್ವಾರ ನಂತರ ಕೇದಾರನಾಥ್ ಅಲ್ಲಿಂದ ಬದರೀನಾಥ್ ಹಾಗೂ ಮಾನಾ ಹಳ್ಳಿ ( ಭಾರತದೇಶದ ಕೊನೆಯ ಹಳ್ಳಿ) ಹೋಗುವ ಯೋಜನೆ ರೆಡಿಯಾಯಿತು .

ತಂಡದ ಸದಸ್ಯರು :  ನಾನು ,  ದಿನಕರ್ , ಧನರಾಜ್ ಹಾಗೂ ಪ್ರಸನ್ನ


ಸೆಪ್ಟೆಂಬರ್ 1 ಶುಕ್ರವಾರ ರಾತ್ರಿ 10 ಕ್ಕೆ  ಕರ್ನಾಟಕ ಸಂಪರ್ಕ ಕ್ರಾಂತಿ ರೈಲಿನಲ್ಲಿ ನಮ್ಮ ಮೊದಲ ಹಿಮಾಲಯ ಪ್ರವಾಸ ಆರಂಭವಾಯಿತು. 32 ಗಂಟೆಗಳ ರೈಲಿನ ಪ್ರಯಾಣದ ನಂತರ ದೆಹಲಿ ತಲುಪಿದಾಗ  ಸೆಪ್ಟೆಂಬರ್ 3 ಭಾನುವಾರ ಬೆಳಗ್ಗೆ 9.30 ನಿಮಿಷ.









 ಮತ್ತೆ 11.30 ರೈಲಿನಲ್ಲಿ ಹರಿದ್ವಾರ ಕಡೆಗೆ ಪ್ರಯಾಣ ಮುಂದುವರೆಯಿತು.  ಹರಿದ್ವಾರದ  ರೈಲಿನಲ್ಲಿ ನರೇಂದ್ರ ಮೋದಿಯವರ ಬೇಟಿಯಾಯಿತು , ಅವರ ಜೊತೆ ಸಾಕಷ್ಟು ಮಾತುಕತೆ ನಡೆಸಿದೆವು. ಹರಿದ್ವಾರ ತಲುಪಿದಾಗ ಸಂಜೆ 6 ಗಂಟೆ.









 ಹರಿದ್ವಾರದಲ್ಲಿ ಸಂಜೆ ನಡೆಯುವ ಗಂಗಾ ಆರತಿ ತುಂಬಾ ಪ್ರಸಿದ್ದಿ , ರೈಲು ನಿಲ್ದಾಣದಿಂದ 2ಕಿ.ಮೀ ದೂರದಲ್ಲಿರುವ "ಹರಿ ಕೀ ಪೌಡೀ" ಗೆ ಆಟೊ ರಿಕ್ಷಾದಲ್ಲಿ ತಲುಪಿದೆವು. ಮುಂದಿನ 10 ನಿಮಿಷದಲ್ಲಿ ಮೊದಲ ಗಂಗಾ ಸ್ನಾನ ಮಾಡಿ ತಯಾರಾದೆವು. ಗಂಗಾ ಆರತಿ ಶುರುವಾದಕ್ಷಣ  ಎಲ್ಲರ ಗಮನ ಅಲ್ಲಿಯೆ ನೆಟ್ಟಿತು. ಮಬ್ಬಗತ್ತಲಲ್ಲಿ ನಡೆಯುವ ಈ ಆರತಿ ಬಲು ಆಕರ್ಷನೀಯ ಸುಮಾರು ಅರ್ಧ ಗಂಟೆಗಳ ಕಾಲ ಈ ಗಂಗಾ ಆರತಿ ನಾಸ್ತಿಕರನ್ನು ಕೂಡ ಕೆಲ ನಿಮಿಷದ ಮಟ್ಟಿಗೆ ಆಸ್ತಿಕರನ್ನಾಗಿ ಪರಿವರ್ತಿಸುವಂತಿತ್ತು. 










ಹರೀ ಕೀ ಪೌಡೀಯೊಂದಿಗೆ ನಮ್ಮ ಹರಿದ್ವಾರ ಯಾತ್ರೆ ಮುಗಿದಿತ್ತು. ನಾವು ನಾಳೆಯ ಯೋಜನೆಯ ಬಗ್ಗೆ ಕಾರ್ಯಪ್ರವೃತ್ತರಾದೆವು. ನಾಳೆ ಕೇದಾರನಾಥಕ್ಕೆ ಹೋಗಲು ಬೆಳಗ್ಗೆ 5.30ರ ಬಸ್ಸಿಗೆ ಹೋಗುವುದೆಂದು ತೀರ್ಮಾನಿಸಿ ಅಲ್ಲೆ ಹತ್ತಿರದಲ್ಲೆ ವಸತಿಗೃಹ ಮಾಡಿದೆವು. ನಂತರ ನಮ್ಮ ಊಟದ ಹುಡುಕಾಟ ಶುರುವಾಯಿತು.




ನಮ್ಮ ಮುಂದಿನ ಪಯಣ ಗೌರಿಕುಂಡ್( ಕೇದಾರನಾಥ) ಕಡೆಗೆ