ಕುಪ್ಪಳ್ಳಿ ‘ಕವಿಮನೆ’


ಕುಪ್ಪಳ್ಳಿ - ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಅದೇ ‘ಕವಿಮನೆ’, ಇದು ಒಂದು ಪ್ರವಾಸೀ ಸ್ಥಳವಾಗಿಯೂ ರೂಪುಗೊಂಡಿದೆ. ಮೂರು ಮಾಳಿಗೆಯನ್ನು ಹೊಂದಿರುವ ಮನೆಯನ್ನು ಮೂಲರೂಪದಲ್ಲೇ ಉಳಿಸಿಕೊಳ್ಳಲಾಗಿದ್ದು, ಈ ಮನೆಯಲ್ಲಿ ಪೂರ್ವಜರು ಬಳಸುತ್ತಿದ್ದ ಬೀಸುವ ಕಲ್ಲು, ಬುಟ್ಟಿಗಳು, ಪೆಟ್ಟಿಗೆಗಳು, ಕುಕ್ಕೆ, ಹೊರಳುಕಲ್ಲು, ಮಚ್ಚು, ಹಂಡೆ, ಪಾತ್ರೆ-ಪಗಡಿ, ಬಟ್ಟೆ-ಬರೆ, ಕುವೆಂಪು ಅವರಿಗೆ ಸಂದ ಸನ್ಮಾನ ಪತ್ರಗಳು, ಗೌರವ ಡಾಕ್ಟರೇಟುಗಳು, ಅವರ ಪುಸ್ತಕಗಳು, ಅವರ ಬಗ್ಗೆ ಬಂದಿರುವ ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳನ್ನು ಜೋಡಿಸಿಡಲಾಗಿದೆ. ಈ ಮನೆಯನ್ನು ನೋಡಲು ಸುಮಾರು 1 ಗಂಟೆ ಬೇಕು. ಸ್ವಲ್ಪ ದೂರದಲ್ಲಿ ಕವಿಶೈಲವಿದೆ. ಅಲ್ಲಿ ಕುವೆಂಪುರವರ ಸಮಾಧಿ ಇದೆ














ದೊಡ್ಡಮನೆ ಆಗುಂಬೆ

ಕರ್ನಾಟಕದ ಚಿರಾಪುಂಜಿ ಎನಿಸಿಕೊಂಡ ಹಸಿರ ಸೊಬಗಿನ ಸುಂದರ ತಾಣ ಆಗುಂಬೆ, ಆಗುಂಬೆಯ ಪೇಟೆಯ ಮುಖ್ಯರಸ್ತೆ ಬಳಿ ಕಾಣಸಿಗುತ್ತದೆ ವಿಶಾಲವಾದ ಎರಡು ಮಹಡಿಗಳ ದೊಡ್ಡಮನೆ. 1986ರಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಶಂಕರನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್‌' ಧಾರಾವಾಹಿಯ ಬಹುಪಾಲು ಚಿತ್ರೀಕರಣವಾಗಿದ್ದು ಇದೇ ಆಗುಂಬೆಯಲ್ಲಿರುವ ಈ ದೊಡ್ಮನೆಯಲ್ಲಿ, ಮಂಗಳೂರು ಹೆಂಚು ಹೊದೆಸಿದ ಈ ಮನೆಯ ಗೋಡೆ ಕಲ್ಲಿನದು. ಒಳಗೆ ಫಳಫಳ ಹೊಳೆಯುವ ಮರದ ಕಂಬಗಳಿವೆ. ಸುಂದರ ಕೆತ್ತನೆಯ ತೊಲೆಗಳಿವೆ. ವಿಶಾಲವಾದ ಒಳಾಂಗಣವಿದೆ. ಮರದಿಂದ ನಿರ್ಮಿಸಿದ ಕೆತ್ತನೆಯ ಬಾಗಿಲುಗಳು ಚೌಕಟ್ಟುಗಳು ನಯನ ಮನೋಹರ. ಉಳಿದುಕೊಳ್ಳಲು ವಿಶಾಲವಾದ ಕೊಠಡಿಗಳಿವೆ, ಇಲ್ಲಿನ ಊಟ ಮತ್ತೊಂದು ವಿಶೇಷ , ಕಸ್ತೂರಿ ಅಕ್ಕ ಬಡಿಸುವ ರೀತಿ ನಮ್ಮ ಮನೆಯ ಅಮ್ಮನೊ , ಅಜ್ಜಿನೋ ಬಡಿಸುವ ತರಹ ಇರುತ್ತದೆ , ರುಚಿಯಾದ ಮಲೆನಾಡಿನ ಬಾಳೆಎಲೆ ಊಟ ಮತ್ತು ಕೊನೆಯಲ್ಲಿ ಕಷಾಯ ಅದ್ಬುತ . ಮತ್ತೆ ಇಲ್ಲಿ ಉಳಿದುಕೊಳ್ಳುವುದಕ್ಕೆ ಮತ್ತು ಊಟಕ್ಕೆ ಇವರು ಹಣ ನಿಗದಿ ಮಾಡಿಲ್ಲ ಹೊರಡುವಾಗ ನಮಗೆ ಇಷ್ಟ ಬಂದಷ್ಟು ಕೊಟ್ಟರೆ ಸಂತೋಷವಾಗಿ ಸ್ವೀಕರಿಸುತ್ತಾರೆ. ಆಗುಂಬೆ ಕಡೆ ಹೋದಾಗ ತಪ್ಪದೆ ದೊಡ್ಮನೆ ಕಸ್ತೂರಿ ಅಕ್ಕ ರವರ ಆತಿಥ್ಯ ಸ್ವೀಕರಿಸಿ . Phone : 08181-233075 , 9448603343











ಕುಂದಾದ್ರಿ (Kundadri)

ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿದೆ. ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ಮಾರ್ಗದಲ್ಲಿ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಈ ಬೆಟ್ಟದ ಮೇಲೆ ಜೈನ ಬಸದಿ ಇದೆ. ಅಲ್ಲಿ ಶ್ರೀ ಪಾರ್ಶ್ವನಾಥರ ಮೂರ್ತಿ ಇದೆ . ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ. ದೂರದಲ್ಲೋ ಕಾಣುವ ಮೋಡ ಈ ಕುಂದಾದ್ರಿಯ ಮೇಲೆ ನಿಂತರೆ ನಿಮ್ಮ ಮಧ್ಯೆ, ನಿಮ್ಮನ್ನು ಸೀಳಿಕೊಂಡೇ ಹೋಗುತ್ತದೆ. ಅದೊಂದು ಹೊಸ ಅನುಭವ ಕೊಡುವ ಸ್ಥಳ. ಇಲ್ಲೇ ಸಣ್ಣ ಪುಷ್ಕರಣಿ ಇದ್ದು, ಅಲ್ಲಿ ವರ್ಷದ 365 ದಿನವೂ ನೀರು ಇರುವುದು ವಿಶೇಷ. ಇನ್ನೊಂದು ಪುಟ್ಟದಾದ ತಾವರೆಕೆರೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ.

















ಮಹಾಲಿಂಗೇಶ್ವರ ದೇವಸ್ಥಾನ , ಕುಕ್ಕೆಹಳ್ಳಿ

ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಕುಕ್ಕೆಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನ ಸಹಸ್ರ ಸಹಸ್ರ ಭಕ್ತರ ಆರಾಧ್ಯ ಸ್ಥಳ.

ಪ್ರಕೃತಿ ಸೊಬಗಿನ ಕುಕ್ಕೆ ಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಸನ್ನಿಧಾನ ದೈವೀಕ ಶಕ್ತಿಯ ನೆಲೆಬೀಡಾಗಿದೆ . ಪ್ರಶಾಂತತೆಯಿಂದ ಕೂಡಿದ ನಿಸರ್ಗದ ಮಡಿಲಲ್ಲಿ ಎತ್ತರದ ಸ್ಥಳದಲ್ಲಿ ಮಹಾಲಿಂಗೇಶ್ವರ ನೆಲೆಸಿ ಭಕ್ತರನ್ನು ಸಲಹುತ್ತಿದ್ದಾನೆ.
ಸುಂದರವಾದ ಶಿಲ್ಪ ಕಲೆಗಳಿಂದ ಆವೃತವಾಗಿರುವ ದೇವಸ್ಥಾನ ಶಾಂತಿ ನೆಮ್ಮದಿಯ ಪ್ರತೀಕವಾಗಿದೆ. ಶ್ರೀ ಸನ್ನಿಧಾನದ ಎದುರು ನಾಗ ಸಾನ್ನಿಧ್ಯವಿದೆ.ಹಾಗೂ ದೇವಸ್ಥಾನದ ಎದುರಿನ ಬಲ ಬದಿಯಲ್ಲಿ ಪ್ರತಿಯೊಬ್ಬರನ್ನು ಆಕರ್ಷಿಸುವವಂತಹ ಸುಂದರವಾದ ಕಲ್ಯಾಣಿ ಇದೆ.


ಸನ್ನಿಧಿಯಲ್ಲಿ ಪ್ರತಿ ನಿತ್ಯ ವಿಶೇಷ ಪೂಜೆಗಳು ನಡೆಯುತ್ತದೆ,ಪ್ರತಿ ಸೋಮವಾರ ಅನ್ನದಾನ ಸೇವೆ ಇದೆ.ಹಾಗೂ ಏಕ,ದಶ,ಶತ,ರುದ್ರಾಭಿಷೇಕ ,ತುಲಾಭಾರ ಸೇವೆ,ರಂಗ ಪೂಜೆ ,ಇನ್ನೂ ಹಲವಾರು ಸೇವೆಗಳು ಶ್ರೀ ದೇವರಿಗೆ ನೆರವೇರುತ್ತದೆ.ಹಾಗೆ ವಾರ್ಷಿಕ ಉತ್ಸವ ಅತೀ ವಿಜೃಂಭಣೆಯಿಂದ ನಡೆಯುತ್ತದೆ.
ಕ್ಷೇತ್ರದ ಐತಿಹಾಸಿಕ ಹಿನ್ನೆಲೆಯ ಪ್ರಕಾರ ಮಹಾ ತಪಸ್ಸಿ ಮುನಿಗಳ ತಪಸ್ಸಿನ ಶಕ್ತಿಯಿಂದ ಉದ್ಭವಿಸಿದ ಶಿವ ಲಿಂಗವನ್ನು ಜೈನ ಅರಸರು ಪ್ರತಿಷ್ಠಾಪನೆ ಮಾಡಿ ಸಕಲ ಪೂಜಾ ಕಾರ್ಯಗಳನ್ನು ನೆರವೇರಿಸಿದರು ಎನ್ನುವ ಪ್ರತೀತಿ ಇದೆ.













ಬೆಳ್ಕಲ್ ತೀರ್ಥ ಜಲಪಾತ


ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದ್ದು ಇದು ವನದೇವಿಯ ಮೈ ಮೇಲೆ ಬೆಳ್ಳಿಯ ಗೆರೆ ಮೂಡಿಸಿದಂತಿದೆ. 500ಕ್ಕೂ ಅಧಿಕ ಅಡಿ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತ ಸೃಷ್ಟಿಕರ್ತನ ಒಂದು ಚಮತ್ಕಾರದಂತಿದೆ.

ಬೆಳ್ಕಲ್ ತೀರ್ಥ ಕೊಲ್ಲೂರಿನಿಂದ 14 ಕಿ.ಮೀ. ದೂರದಲ್ಲಿದೆ. ಜಡ್ಕಲ್‌ನಿಂದ 12 ಕಿ. ಮೀ., ಮುದೂರು ಹಳ್ಳಿಯಿಂದ 8 ಕಿ. ಮೀ ದೂರದ ದಟ್ಟ ಕಾನನದ ಮಧ್ಯ ಇರುವ ಈ ನೈರ್ಸಗಿಕ ಸೊಬಗು ಚಾರಣ ಪ್ರಿಯರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಆದರೆ ಈ ತೀರ್ಥದ ಬಳಿ ತೆರಳುವುದು ಮಾತ್ರ ಸುಲಭ ಸಾಧ್ಯವಲ್ಲ, ಇಲ್ಲಿಗೆ ಸಾಗಬೇಕಾದರೆ ಕಾಲು ದಾರಿಯಲ್ಲಿ ಸುಮಾರು 5 ಕಿ.ಮೀ. ಕಾಡಿನಲ್ಲಿ ಗುಡ್ಡ, ಬಂಡೆಗಳ ನಡುವೆ ಸುಮಾರು ಒಂದು ಗಂಟೆ ಕಾಲ್ನಡಿಗೆಯ ಮೂಲಕ ತೀರ್ಥದ ಬಳಿ ತಲುಪಬೇಕಾಗಿದೆ. 

ಈ ಬೆಳ್ಕಲ್ ತೀರ್ಥವು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಎಳ್ಳಮಾವಾಸ್ಯೆಯ ದಿನದಂದು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅದರಂತೆ ಸಾವಿರಾರು ಭಕ್ತರು ಎಳ್ಳಮಾವಾಸ್ಯೆಯ ದಿನ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಾರೆ.