ಭೀಮೇಶ್ವರ ದೇವಾಲಯ / ಜಲಪಾತ

  ಕಣ್ಣು ಹಾಯಿಸಿದಷ್ಟು  ಹಸಿರು ರಾಶಿ ಮಧ್ಯೆ ಬಳ್ಳಿಯಂತೆ ಬಂಡೆಗಳ ನಡುವೆ ಬಳುಕಿ ಬರುವ ಜಲಧಾರೆ ಸುತ್ತಲೂ ಹಸಿರ ಹೊದಿಕೆಯನ್ನು ಹೊತ್ತುಕೊಂಡು ನಿಂತಿರುವ ಪಶ್ಚಿಮಘಟ್ಟಗಳು, ಪ್ರಕೃತಿ ಪ್ರೀತಿಸುವವನಿಗೆ ಭೀಮೇಶ್ವರ ದೇವಸ್ಥಾನದ ಸುತ್ತಲಿನ ಗುಡ್ಡ ಬೆಟ್ಟಗಳ ಹಸಿರಿನ ವಾತಾವರಣವು ಸ್ವರ್ಗ ಲೋಕದಂತೆ ಕಾಣುತ್ತದೆ.  50 ಅಡಿ ಎತ್ತರದಿಂದ ಧೋ ಎಂದು ಹಾಲಿನ ನೊರೆಯಂತೆ ಸುರಿಯುವ ಜಲಪಾತ ನೋಡಲು ಬಹು ಮೋಹಕವಾಗಿದೆ.

ಪುರಾಣ ಕಥೆಗಳ ಪ್ರಕಾರ ಪಾಂಡವರು  ಅಜ್ಞಾತವಾಸದಲ್ಲಿದ್ದಾಗ ಭೀಮನು ಶಿವಲಿಂಗ ಮತ್ತು ದೇವಸ್ಥಾನವನ್ನು ನಿರ್ಮಿಸಿದನಂತೆ. ಆದ್ದರಿಂದ  ಭೀಮೇಶ್ವರ ದೇವಸ್ಥಾನ ಎಂದು ಹೆಸರಿಡಲಾಗಿದೆ.

ದೇವಸ್ಥಾನವು   ಸಾಗರ - ಭಟ್ಕಳ ರಸ್ತೆಯಲ್ಲಿ  ಕೋಗಾರ್‌ ಕ್ರಾಸ್  ನಿಂದ 2.5 ಕಿ,ಮೀ ದೂರ  ಬಲಬದಿಯಲ್ಲಿ ಭೀಮೇಶ್ವರ ದೇವಸ್ಥಾನಕ್ಕೆ ದಾರಿ ಎನ್ನುವ ನಾಮ ಫ‌ಲಕವಿದೆ ಇಲ್ಲಿಂದ 2 ಕಿ.ಮೀ ಗಳ  ಕಾಡಿನ ಹಾದಿ.


  ಕೂಸಳ್ಳಿಯಿಂದ ಹೊರಟಾಗ ಸಮಯ 4 ಗಂಟೆ ಯಾಗಿತ್ತು . ಇಲ್ಲಿಂದ ಭೀಮೇಶ್ವರಕ್ಕೆ  50 ಕಿ.ಮೀ ದೂರ. ತೂದಳ್ಳಿ ರಸ್ತೆ ಮುಖಾಂತರ ಸಾಗರ - ಭಟ್ಕಳ ಹೆದ್ದಾರಿ ತಲುಪಿದೆವು . ಇಲ್ಲಿ ಒಂದು ಟೀ ಬ್ರೇಕ್ ಗೆ ನಿಲ್ಲಿಸಿದೆವು. ಮಳೆಯಲಿ ಟೀ ಜೊತೆಗೆ ಬಿಸಿ ಬಿಸಿ ಆಲೂ ಬೊಂಡ  ಅದ್ಬುತ !!! .  ಮತ್ತೆ ನಮ್ಮ ಪಯಣ ಸುಂದರ ಹೆದ್ದಾರಿಯಲ್ಲಿ   ಪ್ರಕೃತಿಯ ನಡುವೆ ಮುಂದುವರೆಯಿತು.







ನಾವು ಭೀಮೇಶ್ವರ ಕ್ರಾಸ್ ತಲುಪಿದಾಗ ಸಮಯ 6 ಗಂಟೆ ದಾಟಿತ್ತು , ಇಲ್ಲಿಂದ ಭೀಮೇಶ್ವರಕ್ಕೆ  2 ಕಿ.ಮೀ ಮಣ್ಣಿನ ರಸ್ತೆ , ಮಳೆ ಬರುತ್ತಿದ್ದರಿಂದ ಮಣ್ಣಿನ ರಸ್ತೆ ಕೆಸರು ಗದ್ದೆ ಯಾಗಿತ್ತು, ಇಲ್ಲಿ ಬೈಕ್ ಚಲಾಯಿಸುವುದು ಕಷ್ಟವಾಯಿತು. ಒಂದು ಹಂತದಲ್ಲಿ ಧನರಾಜ್ ಬೈಕ್ ಸ್ಕಿಡ್ ಆಯಿತು ಹಾಗೂ ಪ್ರಸನ್ನ ಬೈಕ್  ಸಂಪೂರ್ಣ ಹತೋಟಿ ಕಳೆದುಕೊಂಡಿತು ಆದರೆ ಯಾರಿಗೂ ಯಾವುದೇ ತೊಂದರೆಯಾಗಲಿಲ್ಲ. ಅಲ್ಲಿಂದ ಭೀಮೇಶ್ವರದ  ಭಟ್ಟರ  ಮನೆ  ತಲುಪುವ ವೇಳೆಗೆ ಸಮಯ 7 ಗಂಟೆಯಾಗಿತ್ತು.
(ಮಳೆಗಾಲದಲ್ಲಿ ವಾಹನಗಳನ್ನು ಭೀಮೇಶ್ವರ ಕ್ರಾಸ್ ನಲ್ಲಿ ಬಿಟ್ಟು 2 ಕಿ.ಮೀ ನಡೆದು ಹೋಗುವುದು ಉತ್ತಮ)
ಭಟ್ಟರು ನಮ್ಮನ್ನು ಸ್ವಾಗತಿಸಿ ನಾವು ಉಳಿದುಕೊಳ್ಳಲು ಕೊಠಡಿ ತೋರಿಸಿದರು.  ನಂತರ ಬಿಸಿ ಬಿಸಿ ಕಾಫಿ ತಂದು ಕೊಟ್ಟರು. ಬೆಳಿಗ್ಗೆಯಿಂದ ಮಳೆ ನೀರಲ್ಲಿ ಸ್ಥಾನ ಮಾಡಿದ್ದ ನಾವು ಈಗ ಬಿಸಿ ನೀರಿನ ಸ್ನಾನಕ್ಕೆ ಹೊರೆಟೆವು . ಸೌದೆ ಉಪಯೋಗಿಸಿ ಹಂಡೆ ಒಲೆಯಲ್ಲಿ ಖಾಯಿಸಿದ್ದ ನೀರು ತುಂಬಾ ಬಿಸಿಯಾಗಿತ್ತು. ಎಲ್ಲರೂ ಸ್ನಾನ ಮುಗಿಸುವ ವೇಳೆಗೆ ಸಮಯ 8.30 ನಿಮಿಷ , ಅಷ್ಟರಲ್ಲಿ ಭಟ್ಟರು ಊಟಕ್ಕೆ ಕರೆದರು. ಊಟಕ್ಕೆ ಅನ್ನ ಸಾಂಬಾರ್ ಪಲ್ಯ ಮತ್ತು ಮಜ್ಜಿಗೆ ತುಂಬಾ ಚೆನ್ನಾಗಿತ್ತು.



ಊಟದ ನಂತರ ಸ್ವಲ್ಪ ಸಮಯ ಹರಟೆಯ ನಂತರ ನಿದ್ದೆಗೆ ಜಾರಿದೆವು. ರಾತ್ರಿ ಮಳೆ ನಿರಂತರವಾಗಿ ಬರುತ್ತಿತ್ತು.

ಬೆಳಿಗ್ಗೆ 5 ಗಂಟೆಗೆ ಎದ್ದು ಎಲ್ಲರೂ ಸ್ನಾನ ಮುಗಿಸಿದೆವು ನಂತರ ಟೀ ಕುಡಿದು ದೇವಾಲಯದ ಕಡೆಗೆ ಹೊರೆಟೆವು . ಭಟ್ಟರ ಮನೆಯಿಂದ ದೇವಾಲಯಕ್ಕೆ 5 ನಿಮಿಷದ ಹಾದಿ, ಇಲ್ಲಿಂದ ಕ್ಯಾಮರಾದ ಕೆಲಸ ಶುರುವಾಯಿತು. ತುಂಬಾ ಪ್ರಾಚೀನ ಕಾಲದ ದೇವಾಲಯ ಅದರ ಪಕ್ಕದಲ್ಲೆ ಇರುವ ಜಲಪಾತ ಮನಮೋಹಕವಾಗಿತ್ತು. ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಂಡೆವು.








ಅರ್ಚಕರು ಎಲ್ಲರಿಗೂ ಶಂಖ ಹಾಗೂ ಜಾಗಟೆ ಗಳನ್ನು ಕೊಟ್ಟರು , ಶಂಖ ಜಾಗಟೆ ಹಾಗೂ ಗಂಟೆಯ ನಾದದೊಂದಿಗೆ ಪೂಜೆ ನಡೆಯಿತು.











 ಪೂಜೆ ಮುಗಿಸಿ ಭೀಮೇಶ್ವರನ ದರ್ಶನ ಮಾಡಿ ಜಲಪಾತದ ಫೋಟೋಗಳನ್ನು ತೆಗೆದು ಮತ್ತೆ ಭಟ್ಟರ ಮನೆ ತಲುಪಿದೆವು. ಬಿಸಿ ಬಿಸಿಯಾದ  ಉಪ್ಪಿಟ್ಟು ನಮಗಾಗಿ ಕಾಯುತ್ತಿತ್ತು.  ತಿಂಡಿ ತಿಂದು ಬ್ಯಾಗ್ ಗಳನ್ನು ತೆಗೆದುಕೊಂಡು ಭಟ್ಟರಿಗೆ ಧನ್ಯವಾದ ತಿಳಿಸಿ ಹೊರೆಟೆವು.

ಮಾಹಿತಿ  :  ಭೀಮೇಶ್ವರದಲ್ಲಿ  ವಸತಿ ಮತ್ತು ಊಟದ ವ್ಯವಸ್ಥೆಗಾಗಿ 




 "ಯೋಜನೆ ಪ್ರಕಾರ  ಇಲ್ಲಿಂದ ಮುಂದೆ ಹುಲಿಕಲ್ ಘಾಟ್ ಮುಖಾಂತರ ಮೆಟ್ಕಲ್ ಗಣಪತಿ ಗುಡ್ಡಕ್ಕೆ ಹೋಗುವುದು"









ಕೂಸಳ್ಳಿ ಜಲಪಾತ


    ಉಡುಪಿಯಿಂದ 80 ಕಿ.ಮೀ ದೂರ ಕಾರವಾರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರೂರು ಇದೆ. ಶಿರೂರಿನಲ್ಲಿ ಬಲಕ್ಕೆ ತೂದಳ್ಳಿ ಮುಖ್ಯರಸ್ತೆಯಲ್ಲಿ  8 ಕಿ. ಮೀ ಚಲಿಸಿದ ನಂತರ  ರಸ್ತೆ  ಕವಲೊಡೆಯುತ್ತದೆ.  ಇಲ್ಲಿ ನೇರವಾಗಿ ಸಿಮೆಂಟ್  ರಸ್ತೆ ಯಲ್ಲಿ 1/2 ಕಿ.ಮೀ ಕ್ರಮಿಸಿದರೆ  ಮತ್ತೆ ಕವಲು ರಸ್ತೆ ಸಿಗುತ್ತದೆ ಇಲ್ಲಿ ಎಡಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ  3 ಕಿ.ಮೀ ಪ್ರಯಾಣಿಸಿದರೆ ಕೂಸಳ್ಳಿ ಯ ಕೊನೆಯ ಮನೆಯ ಹತ್ತಿರ ರಸ್ತೆ ಕೊನೆಯಾಗುತ್ತದೆ. ಇಲ್ಲಿಂದ 4 ಕಿ.ಮೀ ಕಾಡಿನಲ್ಲಿ ನಡೆದರೆ ಕೂಸಳ್ಳಿ ಜಲಪಾತ ತಲುಪಬಹುದು.


ನಾವು ಮರವಂತೆಯಿಂದ ನೇರವಾಗಿ ಶಿರೂರಿಗೆ ಬಂದೆವು , ಇಲ್ಲಿನ ಮೂಕಾಂಬಿಕಾ ಹೋಟೆಲಿನಲ್ಲಿ ಮದ್ಯಾಹ್ನಕ್ಕೆ ಊಟ ಪಾರ್ಸಲ್ ಮಾಡಿಸಿಕೊಂಡು ಜಿಗಣೆಗಳಿಗಾಗಿ ಉಪ್ಪು ಮತ್ತು ಸುಣ್ಣ ತೆಗೆದುಕೊಂಡು ಮೇಲೆ ತಿಳಿಸಿದಂತೆ ತೂದಳ್ಳಿ ಮುಖ್ಯರಸ್ತೆಯಲ್ಲಿ ಮಳೆಯ ಜೊತೆ  ಪ್ರಯಾಣ ಮುಂದುವರೆಯಿತು.





ಸುಮಾರು  30 ನಿಮಿಷದಲ್ಲಿ ಕೂಸಳ್ಳಿಯ ಕೊನೆಯ ಮನೆ ತಲುಪಿದೆವು . ಮನೆಯವರ ಅನುಮತಿ ಪಡೆದು ಅವರ ಮನೆಯ  ಆವರಣದಲ್ಲಿ  ನಮ್ಮ ಬೈಕ್ ಗಳನ್ನು ಮತ್ತು ಅಲ್ಲೆ ಕಟ್ಟೆಯ ಮೇಲೆ ನಮ್ಮ ಬ್ಯಾಗ್ ಗಳನ್ನು ಇಟ್ಟು  ಊಟದ ಕವರ್ ಮತ್ತು ಕ್ಯಾಮರ ತೆಗೆದು ಕೊಂಡು ಹೊರಡಲು ರೆಡಿಯಾದೆವು . ಮನೆಯವರು ಜಲಪಾತಕ್ಕೆ ಹೋಗುವ ದಾರಿಯನ್ನು ವಿವರಿಸಿದರು. ಅದರಂತೆ ಅವರ ಮನೆಯ ಎದುರಿಗೆ ಇರುವ ಜಲಪಾತದ ನಾಮಫಲಕದ ಪಕ್ಕದ ಕಾಲುದಾರಿಯಲ್ಲಿ ನಮ್ಮ ಚಾರಣ  ಆರಂಭಿಸಿದೆವು, ನಮ್ಮ ಜೊತೆ ಮನೆಯವರ ನಾಯಿ ಕೂಡ ಹೊರಟಿತು.



ಕೂಸಳ್ಳಿಯ ಕೊನೆಯ ಮನೆ


ಶ್ವಾನದಿಂದ ತಂಡದ ಸದಸ್ಯರಿಗೆ ಚಾರಣದ ಬಗ್ಗೆ ಮಾಹಿತಿ







 ಸ್ವಲ್ಪ ಸಮಯ ನಡೆದ ನಂತರ  ಮನೆಯವರು ತಿಳಿಸಿದಂತೆ ನಮಗೆ ಎಡಕ್ಕೆ ಹೋಗುವ ದಾರಿ ಸಿಗಲಿಲ್ಲ (ನಮ್ಮ ಗಮನಕ್ಕೆ ಬಂದಿರಲಿಲ್ಲ)  ಮುಂದೆ ಕಾಲು ದಾರಿ ಬಲಕ್ಕೆ ತಿರುಗಿತು ನಾವು ಮತ್ತೆ ಹಿಂದಕ್ಕೆ ಬಂದು ಎಡಭಾಗದ ದಾರಿ ಹುಡುಕುತ್ತಿರುವಾಗ ನಾಯಿಯು ಒಂದು ಕಡೆ ಎಡಕ್ಕೆ ತಿರುಗಿತು ಗುಂಪಿನಲ್ಲಿ ಒಬ್ಬರು ನಾಯಿಗೆ ದಾರಿ ಗೊತ್ತಿರುತ್ತದೆ ಎಂದರು. ಎಲ್ಲರೂ ನಾಯಿ ಹೊರಟ ದಾರಿಯನ್ನು ಅನುಸರಿಸಿ ಹೊರೆಟೆವು. ಅಲ್ಲಿ ಯಾವುದೇ ಕಾಲು ದಾರಿ ಇರಲಿಲ್ಲ, ಮರಗಳ ನಡುವೆ ಮುಳ್ಳಿನ ಬಳ್ಳಿಗಳ ಮಧ್ಯೆ  ನಡೆಯುತ್ತಿದ್ದೆವು.




ನಾಯಿಯನ್ನು ಅನುಸರಿಸಿದ ದಾರಿ



















ನರೇಶ್ ಮತ್ತು ಧನರಾಜ್ ನಾಯಿಯನ್ನು ಸುರಕ್ಷಿತವಾಗಿ ನೀರನ್ನು ದಾಟಿಸಿದ ಕ್ಷಣ


ನಾಯಿ ನಮ್ಮನ್ನು ಸುಮಾರು 1 ಗಂಟೆ ಕಾಲ ಕಾಡಿನಲ್ಲಿ  ಸುತ್ತಾಡಿಸಿತು. ಜಲಪಾತದ ಯಾವುದೇ ಸೂಚನೆ ಸಿಗಲಿಲ್ಲ. ನಾಯಿ ನಂಬಿ ಬಂದ ನಾವು ಸಂಪೂರ್ಣವಾಗಿ ದಾರಿ ತಪ್ಪಿದ್ದೆವು( ನರೇಶ್ ರವರ ಮೋಬೈಲ್ ನಿಂದ "ಗಗನವು ಎಲ್ಲೋ ಭೂಮಿಯೂ ಎಲ್ಲೋ" ಹಾಡು ಕೇಳಿಸುತ್ತಿತ್ತು). ಆಗಲೇ ಸಮಯ ಸುಮಾರು 2 ಗಂಟೆ ಯಾಗಿತ್ತು. ಇನ್ನು ಸಮಯ ವ್ಯರ್ಥ ಮಾಡಿದರೆ ಹಿಂದಿರುಗುವಾಗ ಕತ್ತಲಾಗಬಹುದೆಂಬ ಆತಂಕ ಮೂಡಿತು. ಏನು ಮಾಡುವುದೆಂದು ಯೋಚಿಸುತ್ತಿರುವಾಗ ತಂದಿದ್ದ  ಊಟವಾದರೂ ಮಾಡೋಣವೆಂದು  ಅಲ್ಲೆ ಹರಿಯುತ್ತಿದ್ದ ನೀರಿನ ತೊರೆಯ ಬಳಿ ಊಟಕ್ಕೆ ಕುಳಿತೆವು. ನಾಯಿಯು ಸಹ ನಮ್ಮಜೊತೆ ಕಾಡಿನಲ್ಲಿ ಸುತ್ತಿ ನಮ್ಮಂತೆ ಸುಸ್ತಾಗಿತ್ತು ಒಂದು ಪಾಲು ಊಟ ಅದಕ್ಕೂ ಬಡಿಸಿದೆವು.

ಇದು ಊಟದ ಸಮಯ ಆನಂದಮಯ


ಊಟ ನೀಡಿದ ದಿನೇಶ್ ಗೆ ನಾಯಿಯಿಂದ ಸಿಹಿ ಮುತ್ತು










ನಾವು ಊಟ ಮಾಡಿದ ಸ್ಥಳದಿಂದ ಜಲಪಾತ ದೃಶ್ಯ
ಊಟದ ನಂತರ ಹಿಂದಕ್ಕೆ ಹೊರಡುವುದೆಂದು ತೀರ್ಮಾನಿಸಿ ಬಂದ ದಾರಿಯಲ್ಲಿ ಹಿಂದಕ್ಕೆ ಹೊರೆಟೆವು ( ಅದೂ ಕೂಡ ಸರಿಯಾಗಿ ತಿಳಿದಿರಲಿಲ್ಲ!!!) ಜಲಪಾತ ನೋಡದೆ ಹಿಂದಕ್ಕೆ ಹೊರಟಿದ್ದು ಎಲ್ಲರಲ್ಲೂ ನಿರಾಸೆ ಮೂಡಿಸಿತ್ತು. ಹಿಂದಿರುಗುತಿದ್ದಾಗ ಕೊನೆಗೂ ಒಂದು ಕಾಲು ದಾರಿ ಸಿಕ್ಕಿತು!. ಈಗ  ಎಲ್ಲರಲ್ಲೂ ಹೊಸ  ಉತ್ಸಾಹ ಮೂಡಿತು. ಎಲ್ಲರೂ ಜಲಪಾತದ ಕಡೆಗೆ ಹೆಜ್ಜೆ ಹಾಕಿದೆವು. ಮುಂದಿನ 30 ನಿಮಿಷದಲ್ಲಿ ಜಲಪಾತ ಬಳಿ ತಲುಪಿದ್ದೆವು.  ಜಲಪಾತದಲ್ಲಿ ನೀರಿನ ರಭಸ ಜೋರಾಗಿತ್ತು  ಮತ್ತು ನೋಡಲು ಮನೋಹರವಾಗಿತ್ತು. ಸುಮಾರು ಸಮಯ ಜಲಪಾತದ ಬಳಿ ಕಳೆದೆವು ಹಾಗೂ ಸಾಕಷ್ಟು ಪೋಟೋಗಳನ್ನು ತೆಗೆದ ನಂತರ ಹೊರೆಟೆವು.
















ನಾಯಿಯೊಂದಿಗೆ ತಂಡದ ಸದಸ್ಯರ ಸೆಲ್ಫಿ  ಜಲಪಾತದ ಬಳಿ















ಜಲಪಾತದಿಂದ ನಾವು ಗಾಡಿಗಳನ್ನು ನಿಲ್ಲಿಸಿದ್ದ ಮನೆಗೆ ಬರಲು ತೆಗೆದುಕೊಂಡಿದ್ದು ಕೇವಲ 40 ನಿಮಿಷಗಳು , ಮನೆಯ ಬಳಿ ಬಂದಾಗ ಸಮಯ ಸುಮಾರು 4 ಗಂಟೆಯಾಗಿತ್ತು. ಮನೆಯವರ ಬಳಿ ನೀರನ್ನು ಪಡೆದು ಕುಡಿದೆವು, ಅವರಿಗೆ ನಾವು ದಾರಿ ತಪ್ಪಿದ ಅನುಭವ ಹಾಗೂ ಅವರ ನಾಯಿ ಕೂಡ ನಮ್ಮ ಜೊತೆ ಬಂದ ವಿಷಯ ತಿಳಿಸಿದಾಗ ಅವರು ಆಶ್ಚರ್ಯದಿಂದ ನಾಯಿ ಇಲ್ಲಿಯವರೆಗೆ ಯಾರೊಂದಿಗೂ ಹೋಗಿರಲಿಲ್ಲ ಎಂದಾಗ ನಮಗೂ ಆಶ್ಚರ್ಯವಾಯಿತು. ಮನೆಯವರಿಗೆ ಧನ್ಯವಾದ ತಿಳಿಸಿ ಹೊರೆಟೆವು.

 ಹೋಗುವ ದಾರಿಯಲ್ಲಿ  ಕಾಣಿಸಿದ ಕೂಸಳ್ಳಿ ಜಲಪಾತದ ದೃಶ್ಯ




" ಬುಲೆಟ್ ಸದ್ದಿನೊಂದಿಗೆ ನಮ್ಮ ಮುಂದಿನ ಪಯಣ ಭೀಮೇಶ್ವರ ಜಲಪಾತದ ಕಡೆಗೆ ಸಾಗಿತು"












ಮಳೆಗಾಲದಲ್ಲೊಂದು ಬೈಕ್ ಸವಾರಿ


 
ಮಳೆಗಾಲ ಬಂತೆಂದರೆ ಜಲಪಾತಗಳು ಜೀವಕಳೆ ಪಡೆದುಕೊಳ್ಳುತ್ತವೆ , ಈ ಸಮಯದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಸುಂದರ ಅನುಭವ .

ಈ ಸಲ ಉಡುಪಿ ಜಿಲ್ಲೆಯ  ಶಿರೂರು ಸಮೀಪವಿರುವ  ಕೂಸಳ್ಳಿ ಜಲಪಾತ , ಭಟ್ಕಳ ಸಾಗರ ರಸ್ತೆಯಲ್ಲಿರುವ ಬೀಮೇಶ್ವರ ಜಲಪಾತ , ಹುಲಿಕಲ್ ಘಾಟ್ ಹಾಗೂ ಮೆಟ್ಕಲ್ ಗಣಪತಿ ಗುಡ್ಡಕ್ಕೆ  ಬೈಕಿನಲ್ಲಿ  ಸವಾರಿ ಹೋಗುವುದೆಂದು ಯೋಜನೆ ರೆಡಿಯಾಯಿತು.



ಮೊದಲು ನಾಲ್ಕು ಜನರಿದ್ದ ( ನಾನು , ದಿನಕರ್ , ನರೇಶ್ ಮತ್ತು ಧನರಾಜ್) ತಂಡಕ್ಕೆ  ಮತ್ತೆ ನಾಲ್ಕು ಜನ (ಪ್ರಸನ್ನ , ಗುರುಪ್ರಸಾದ್ , ದಿನೇಶ್ ಹಾಗೂ ಶಶಿಧರ್ ) ಸೇರ್ಪಡೆಯಾದರು  ಈಗ ತಂಡದ ಮೊತ್ತ 8. 

ನಾನು , ದಿನಕರ್ , ಶಶಿಧರ್ , ಪ್ರಸನ್ನ ಮತ್ತು ದಿನೇಶ್ ಬೆಂಗಳೂರಿನಿಂದ , ನರೇಶ್  ಮತ್ತು ಗುರುಪ್ರಸಾದ್ ಬೆಳ್ತಂಗಡಿಯಿಂದ ಮತ್ತು ಧನರಾಜ್ ಚಿಕ್ಕಮಗಳೂರಿನಿಂದ.

ಎಲ್ಲರೂ ಮಣಿಪಾಲಿನ ರಾಯಲ್ ಬ್ರದರ್ಸ್ ಬೈಕ್ ಸೆಂಟರ್ ಹತ್ತಿರ ಸೇರುವುದೆಂದು ತೀರ್ಮಾವಾಯಿತು.

DAY  1 

 ದಿನಕರ್ ಮತ್ತು ನಾನು ಕಾರ್ಕಳದ ದಿನಕರ್ ಮನೆಯಿಂದ ಹೊರಡಲು ರೆಡಿಯಾದೆವು , ಅಲ್ಲಿಗೆ ನರೇಶ್ ಮತ್ತು ಗುರುಪ್ರಸಾದ್ ಬಂದು ಸೇರಿದರು. ದಿನಕರ್ ಮನೆಯಲ್ಲಿ ಎಲ್ಲರೂ ತಿಂಡಿ ತಿಂದು ಟೀ ಕುಡಿದು ಹೊರಟಾಗ ಸಮಯ ಬೆಳಗ್ಗೆ 7.30 , ಜಿಟಿ ಜಿಟಿ ಮಳೆಯಲ್ಲೆ ನಮ್ಮ ಪಯಣ ಆರಂಭವಾಯಿತು. ಅಲ್ಲಿಂದ ಅಜೆಕಾರ್ ಮೂಲಕ ಮಣಿಪಾಲ್ ಬಂದು ಸೇರಿದಾಗ ಸಮಯ 8.30. ಇನ್ನು ಯಾರು ಬಂದಿರಲಿಲ್ಲ . ಚಿಕ್ಕ ಪೋಟೊ ಸೇಷನ್ ನಡೆಯಿತು. 












ಅಷ್ಟರಲ್ಲಿ ಧನರಾಜ್ , ದಿನೇಶ್ , ಪ್ರಸನ್ನ ಮತ್ತು ಶಶಿಧರ್ ಅಲ್ಲಿಗೆ ಬಂದು ಸೇರಿದರು. ತಡಮಾಡದೆ ಎರಡು ಬೈಕ್ ಗಳನ್ನು ಬಾಡಿಗೆಗೆ ಪಡೆದರು. ಈಗ ನಾಲ್ಕು ಬುಲೆಟ್ ಗಳು ಹೊರಡಲು ರೆಡಿಯಾಗಿದ್ದವು . ಸಮಯ ಸುಮಾರು 9.45 ನಿಮಿಷ .

ಅಲ್ಲಿಂದ ನೇರವಾಗಿ ಉಡುಪಿ - ಕುಂದಾಪುರ  ಮುಖಾಂತರ ಶಿರೂರು ಕಡೆಗೆ ಪ್ರಯಾಣ ಬೆಳೆಸಿದೆವು.  ಸುಮಾರು 1 ಗಂಟೆ ಪ್ರಯಾಣದ ನಂತರ ಮರವಂತೆ ಬಳಿಯ ಸಮುದ್ರ ತೀರಕ್ಕೆ ಬಂದು ಸೇರಿದ್ದೆವು. ಇಲ್ಲಿ ಸುಮಾರು 1/2 ಗಂಟೆಗಳ ಕಾಲ ಸಮಯ ಕಳೆದೆವು. 






















ಪೋಟೊ ಸೇಷನ್ ನಂತರ   ಮನೆಯಿಂದ ತಂದಿದ್ದ ನೀರು ದೋಸೆ ತಿಂದು ಅಲ್ಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿದು ಮತ್ತೆ ಪ್ರಯಾಣ ಮುಂದುವರೆಸಿದೆವು .



 "ಮುಂದಿನ ಪಯಣ.........  ಕೂಸಳ್ಳಿ ಜಲಪಾತಕ್ಕೆ"