ಕವಲೇದುರ್ಗ

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ತಾಣ.ತೀರ್ಥಹಳ್ಳಿಯಿಂದ 18 ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು 8೦ ಕಿ.ಮೀ ದೂರದಲ್ಲಿದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ
ಇದು ಮೂರು ಸುತ್ತಿನ ಕೋಟೆಯಾಗಿದ್ದು, ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯರೇಖೆಗಳನ್ನು ಅನುಸರಿಸಿ ಬೃಹದ್ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನುಪಯೋಗಿಸಿ ನಿರ್ಮಿಸಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಮಹಾದ್ವಾರವಿದ್ದು ಅದರ ಇಕ್ಕೆಲಗಳಲ್ಲೂ ರಕ್ಷಣಾ ಕೊಠಡಿಗಳಿವೆ. ಕೋಟೆಯ ಮದ್ಯದಲ್ಲಿ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ. ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ಶ್ರೀಕಂಠೇಶ್ವರ ದೇವಸ್ಥಾನವಿದೆ. ದೇವಸ್ಥಾನವು ಗರ್ಭಗೃಹವನ್ನು ಹೊಂದಿದ್ದು ಎದುರಿಗೆ ಒಂದು ನಂದಿಮಂಟಪ ಮತ್ತು ಮುಖಮಂಟಪವಿದೆ. ಸೂರ್ಯಾಸ್ತದ ಸಮಯದಲ್ಲಿ ಇಲ್ಲಿಂದ ಮುಳುಗುವ ಸೂರ್ಯನ ಸುಂದರ ನೋಟ ಕಾಣಸಿಗುವುದು.