ಅರಿಶಿನಗುಂಡಿ ಜಲಪಾತ

DAY - 2 (18-09-2016)

ಬೆಳಗ್ಗೆ ಎದ್ದು ಬ್ರೆಷ್ ಮಾಡಿ ಎಲ್ಲರೂ ರೆಡಿಯಾಗಿ ಲೆಮನ್ ಟೀ ಕುಡಿದು ಭಟ್ಟರಿಗೆ ಧನ್ಯವಾದ ತಿಳಿಸಿ ಕರೆಕಟ್ಟೆ ಹೋಗುವ ದಾರಿಯಲ್ಲಿ ಚಾರಣ ಶುರು ಮಾಡಿದೆವು. ಸಮಯ ಸುಮಾರು 7.30 ನಿಮಿಷ.





ದಾರಿ  ಇಳಿಮುಖವಾಗಿದ್ದರಿಂದ  ಎಲ್ಲೂ ಬ್ರೇಕ್ ತೆಗೆದುಕೊಳ್ಳದೆ ಸುಮಾರು 1 ಗಂಟೆಯಲ್ಲಿ  ಸಂತೋಷ್ ಹೋಟಲ್ ತಲುಪಿದೆವು. ಇಲ್ಲಿಂದ ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಯೋಜನೆ ನಮ್ಮದಾಗಿತ್ತು. ಆದರೆ 2 ತೊಂದರೆ 1) ಅರಣ್ಯ ಇಲಾಖೆಯವರ ಅನುಮತಿ ಪಡೆಯ ಬೇಕು 2) ಗೈಡ್ ಇಲ್ಲದೆ ಚಾರಣ ಮಾಡಲು ಸಾಧ್ಯವಿಲ್ಲ.


ಮೊದಲನೆಯದಾಗಿ ಹೋಟೆಲ್ ನಲ್ಲಿ ಗೈಡ್ ಬಗ್ಗೆ ವಿಚಾರಿಸಿದೆವು ಅವರು ದೂರವಾಣಿ ಮೂಲಕ ಸಂಪರ್ಕಿಸಿ 1/2 ಗಂಟೆ ಯಲ್ಲಿ ಬರುವರೆಂದು ತಿಳಿಸಿದರು ಒಂದು ಕೆಲಸ ಮುಗಿದಿತ್ತು. ಎರಡೆನೆಯದು ಅನುಮತಿ ಹೋಟೆಲ್ ಎದುರುಗಡೆ ಇದ್ದ ಅರಣ್ಯ ಇಲಾಖೆಯ ಕಛೇರಿಗೆ ನರೇಶ್ ಮತ್ತು ದಿನಕರ್ ಅನುಮತಿ ಪಡೆಯಲು ಹೋದರು, ನರೇಶ್ ಗೆ ಅರಣ್ಯ ಇಲಾಖೆಯಲ್ಲಿ ಪರಿಚಯವಿರುವವರಿಂದ ದೂರವಾಣಿ ಮಾಡಿಸಿ ಅನುಮತಿ ಪಡೆಯಲು ಸಫಲರಾದರು. ಈಗ ನೆಮ್ಮದಿಯಿಂದ ಎಲ್ಲರೂ ಇಡ್ಲಿ ತಿಂದು ಮದ್ಯಾಹ್ನಕ್ಕೂ ಪಾರ್ಸಲ್ ಮಾಡಿಸಿಕೊಡೆವು. ಗೈಡ್ ಇನ್ನು ಬಂದಿರಲಿಲ್ಲ. ಧನರಾಜ್ ಮತ್ತು ದಿನಕರ್ ಜಿಗಣೆಯಿಂದ ತಪ್ಪಿಸಿಕೊಳ್ಳಲು ವಿಶೇಷವಾದ ಪಾನೀಯ(ನಶೆ , ಉಪ್ಪು, ಸುಣ್ಣ ಮತ್ತು ನೀರು) 4 ಬಾಟಲ್ ಗಳನ್ನು ರೆಡಿಮಾಡಿದರು


 ಅಷ್ಟರಲ್ಲಿ ಗೈಡ್ ಬಂದರು ಹೆಸರು ರಾಜು , ಸಂತೋಷ್ ಹೋಟಲಿನಿಂದ ಕರೆಕಟ್ಟೆ ಬರುವ ದಾರಿಯಲ್ಲಿ 1/2 ಕಿ.ಮೀ ನಡೆದು ಎಡಕ್ಕೆ ಕಾಡಿನ ಒಳಗೆ ಪ್ರವೇಶಿಸಿದೆವು. 





ಇಲ್ಲಿಂದ ಮುಂದೆ ಯಾವುದೇ ದಾರಿ ಇರಲಿಲ್ಲ ಗೈಡ್ ರಾಜುರವರು ಮುಂದೆ ದಾರಿ ಮಾಡಿಕೊಂಡು ಹೋಗುತ್ತಿದ್ದರು ನಾವು ಅವರ ಹಿಂದೆ ಸಾಗುತ್ತದ್ದೆವು. ದಾರಿ ತುಂಬಾ ಜಾರುತಿತ್ತು ಮತ್ತು ಜಿಗಣೆಗಳ ಕಾಟ ಶುರುವಾಯಿತು. ಎಲ್ಲೂ ನಿಲ್ಲುವವಾಗಿರಲಿಲ್ಲ ನಿಂತರೆ 4 ರಿಂದ 5 ಜಿಗಣೆಗಳು ಕಾಲುಗಳ ಮೇಲೆ ಹಾಜರಾಗುತ್ತಿದ್ದವು. 



ಸುಮಾರು 30 ನಿಮಿಷದ ನಂತರ ನೀರಿನ ತೊರೆ ಸಿಕ್ಕಿತು ಇದನ್ನು ದಾಟಿದೆವು. ಮುಂದೆ ಏರು ದಾರಿಯಲ್ಲಿ ನಡೆದು ಜೀಪ್ ಟ್ರಾಕ್ (ಕಚ್ಚಾ ರಸ್ತೆ) ತಲುಪಿದೆವು. ಇಲ್ಲಿಂದ ಮತ್ತೆ ಬಲಕ್ಕೆ ಇಳಿಜಾರಿನಲ್ಲಿ ಇಳಿದೆವು ಇಲ್ಲಿ ಯಾವುದೇ ಕಾಲುದಾರಿ ಇರಲಿಲ್ಲ ಸಲ್ಪ ದೂರ ಸಾಗಿದ ಮೇಲೆ ರಾಜುರವರು ದಾರಿ ತಪ್ಪಿದ್ದರು ಎಲ್ಲರೂ ಆತಂಕಕ್ಕೆ ಒಳಗಾದೆವು ಏಕೆಂದರೆ ಜಿಗಣೆಗಳ ಕಾಟ ಎಷ್ಟಿಂತೆಂದರೆ ಊಹಿಸಲು ಸಾಧ್ಯವಿಲ್ಲ. ಅಂತಿಮವಾಗಿ ಗೈಡ್ ರಾಜುರವರ ಪ್ರಯತ್ತದಿಂದ ಬಹಳ ಸಮಯದ ನಂತರ ಒಂದು ಕಾಲು ದಾರಿಗೆ ಸೇರಿದೆವು ಅಲ್ಲಿಂದ ಮುಂದೆ 10 ನಿಮಿಷದಲ್ಲಿ ಜಲಪಾತದ ಮುಂದೆ ಬಂದು ನಿಂತಿದ್ದೆವು, ಇಲ್ಲಿಯವರೆಗೂ ಅನುಭವಿಸಿದ ಕಷ್ಟವೆಲ್ಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿತ್ತು.









    ನೀರಿನಲ್ಲಿ ತುಂಬಾ ಸಮಯ ಕಳೆದ ನಂತರ  ತಂದಿದ್ದ  ಇಡ್ಲಿ ತಿಂದು ಮತ್ತೆ 30 ನಿಮಿಷ ನಡೆದು ಜೀಪ್ ಟ್ರಾಕ್ ತಲುಪಿದೆವು. ಗೈಡ್ ರಾಜುರವರಿಗೆ ಧನ್ಯವಾದ ತಿಳಿಸಿ ಅವರನ್ನು ಕಳುಹಿಸಿ ನಾವು ಮೂಕಾಂಬಿಕೆ ಆಭಯಾರಣ್ಯದ ಪ್ರವೇಶ ದ್ವಾರಕ್ಕೆ ಜೀಪ್ ಟ್ರಾಕ್ ನಲ್ಲಿ ಹೊರೆಟೆವು ಇಲ್ಲಿಂದ ಪ್ರವೇಶ ದ್ವಾರಕ್ಕೆ  ಸುಮಾರು 7 ಕಿ. ಮೀ ದೂರ. ಸುಮಾರು 1.30 ನಿಮಿಷಗಳ ಸತತವಾಗಿ ಕಾಡಿನಲ್ಲಿ ನಡೆದು ಮುಖ್ಯದ್ವಾರ ತಲುಪಿದಾಗ ಸಮಯ ಸುಮಾರು 2.30 ನಿಮಿಷ. ಇಲ್ಲಿಂದ ಆಟೋನಲ್ಲಿ ಕೊಲ್ಲೂರಿಗೆ(2ಕಿ.ಮೀ) ಹೋಗಿ ಮೂಕಾಂಬಿಕೆ ದರ್ಶನ ಪಡೆದೆವು.
 


 ಇಲ್ಲಿಗೆ ನಮ್ಮ 2 ದಿನದ ಹಿಡ್ಲುಮನೆ ಜಲಪಾತ - ಕೊಡಚಾದ್ರಿ -ಅರಿಶಿನಗುಂಡಿ ಜಲಪಾತ ಚಾರಣ ಯಶಸ್ವಿಯಾಗಿತ್ತು ಮತ್ತು ಚಾರಣದ ಪ್ರತಿಯೊಂದು ಕ್ಷಣವು ನಮ್ಮ  ನೆನಪಿನಲ್ಲಿ ಸದಾ ಕಾಲ ಉಳಿಯುವಂತಾಯಿತು.

ಮಾಹಿತಿ:
ಕೊಡಚಾದ್ರಿಯ ಪವಿತ್ರಭಟ್ಟರ ರ  ಸಂಖ್ಯೆ :
ಅರಿಶಿನಗುಂಡಿಯ ಗೈಡ್ ರಾಜುರವರ ಸಂಖ್ಯೆ : 9535796525



ಕೊಡಚಾದ್ರಿ



ಹಿಡ್ಲುಮನೆ ಜಲಪಾತದಲ್ಲಿ  ಸುಮಾರು 1/2 ಗಂಟೆ ಕಳೆದ ಮೇಲೆ ಜಲಪಾತದ ಬಲಕ್ಕೆ ಇರುವ ಕಾಲು ದಾರಿಯಲ್ಲಿ ಚಾರಣ ಶುರುವಾಯಿತು.




 ಇಲ್ಲಿಂದ ಮುಂದಕ್ಕೆ ದಾರಿ ತುಂಬಾ ಕಠಿಣವಾಗಿತ್ತು, ದಾರಿ ತುಂಬಾ ಏರು ಮುಖವಾಗಿತ್ತು. ಸುಮಾರು 1 ಗಂಟೆ ನಡೆದ ಮೇಲೆ ಮೊದಲ ವೀಕ್ಷಣ ಸ್ಥಳಕ್ಕೆ ಬಂದೆವು. ಸಮಯ ಸುಮಾರು 12 ಗಂಟೆ ಇಲ್ಲಿಂದ ಸುತ್ತಲಿನ ಚಿತ್ರಣ ತುಂಬಾ ಸೊಗಸಾಗಿತ್ತು ಮತ್ತು ಹಸಿರಿನಿಂದ ಕೂಡಿತ್ತು .




ಸ್ವಲ್ಪ ವಿಶ್ರಾಂತಿ ಪಡೆದು ಮುಂದಕ್ಕೆ ಪ್ರಯಾಣ ಬೆಳೆಸಿದೆವು ಮುಂದೆ ಕಾಲು ದಾರಿ ಮುಗಿದು ಜೀಪ್ ರಸ್ತೆಗೆ ಸೇರಿದೆವು ಇಲ್ಲಿಂದ ಸುಮಾರು 1/2 ಗಂಟೆ  ಕಾಲ ಜೀಪ್ ರಸ್ತೆಯಲ್ಲಿ ನಡೆದು ಮೂಕಾಂಬಿಕೆಯ ಮೂಲ ದೇವಸ್ಥಾನ ಬಳಿ ಬಂದಿದ್ದೆವು.




ಮೊದಲನೆಯದಾಗಿ ಅಲ್ಲೆ ಪಕ್ಕದಲ್ಲಿ ಇದ್ದ ಪೂಜಾರಿಯವರ ಮನೆಗೆ ತೆರಳಿ ರಾತ್ರಿ ಉಳಿದುಕೊಳ್ಳಲು ಜಾಗಕ್ಕೆ ವಿಚಾರಿಸಿದೆವು. ಪೂಜಾರಿಗಳಾದ ಪವಿತ್ರ ಭಟ್ ರವರು ಮನೆಯಲ್ಲಿ ಜಾಗ ಕೊಡಲು ಒಪ್ಪಿದರು ಮತ್ತು ಊಟಕ್ಕೂ ವ್ಯವಸ್ಥೆ ಮಾಡಿದರು. ನಮ್ಮ ಲಗೇಜ್ ಗಳನ್ನು ಅವರ ಮನೆಯಲ್ಲಿ ಇಟ್ಟು ಊಟ ಮುಗಿಸಿದೆವು(ಅನ್ನ ಸಾಂಬಾರ್ , ಪಲ್ಯ ಮತ್ತು ಮಜ್ಜಿಗೆ) ಸಮಯ ಸುಮಾರು 3 ಗಂಟೆ.

ಇಲ್ಲಿಂದ ನಮ್ಮ ಪಯಣ ಕೊಡಚಾದ್ರಿಯ ಸರ್ವಜ್ಞ ಪೀಠದ ಕಡೆಗೆ  ಮೊದಲು ಸಿಕ್ಕಿದ್ದು ಗಣಪತಿ ಗುಹೆ



ನಂತರ 20 ನಿಮಿಷ ನಡೆದ ನಂತರ ತುದಿಗೆ ಅಂದರೆ ಸರ್ವಜ್ಞ ಪೀಠದ ಬಳಿ ಬಂದೆವು  ಅಷ್ಟರಲ್ಲಿ ಪೂರ್ತಿಯಾಗಿ ಮಂಜು ಕವಿಯಿತು.



ಇಲ್ಲಿಂದ ಮುಂದೆ ಚಿತ್ತಮೂಲ ಕಡೆಗೆ ಹೊರೆಟೆವು ತುಂಬಾ ಕಿರಿದಾದ ಮತ್ತು ಇಳಿಜಾರದ ದಾರಿಯಲ್ಲಿ ಸುಮಾರು 15 ನಿಮಿಷ ನಡೆದ ನಂತರ ಚಿತ್ತಮೂಲ ತಲುಪಿದೆವು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ , ಚಿತ್ರಮೂಲದ ಕಲ್ಲು ಬಂಡೆಯ ನಡುವೆ ಯಾವಾಗಲೂ ನೀರು ಹನಿಯುತ್ತಿರುತ್ತದೆ.  



ಮತ್ತೆ ವಾಪಸ್ ಸರ್ವಜ್ಞ ಪೀಠಕ್ಕೆ ಬಂದು ಅಲ್ಲಿಂದ ಕೆಳಕ್ಕೆ ಅಂದರೆ ಭಟ್ಟರ ಮನೆಗೆ ಬಂದಾಗ ಸಮಯ ಸುಮಾರು 6.30 ನಿಮಿಷ,


ಭಟ್ಟರ ಮನೆಯಲ್ಲಿ ಸುಮಾರು ಹೊತ್ತು ಹರಟೆ ಹೊಡೆದು 8 ಗಂಟೆಗೆ ಊಟಕ್ಕೆ ಹೊರೆಟೆವು, ಹೊಟ್ಟೆ ಖಾಲಿಯಾಗಿತ್ತು ಅನ್ನ ಸಾಂಬಾರ್ ರುಚಿಯಾಗಿತ್ತು ಎರೆಡೆರೆಡು ಸುತ್ತು ತಿಂದು ಭಟ್ಟರ ಮನೆಗೆ ಬಂದೆವು, ಅಷ್ಷರಲ್ಲಿ ಭಟ್ಟರು ಮಲಗಲು ಚಾಪೆ ಮತ್ತು ಹೊದಿಕೆ ಗಳನ್ನು ತಂದು ಕೊಟ್ಟರು ಎಲ್ಲರೂ ಸೇರಿ ಅದನ್ನು ಹಾಸಿ ಮಲಗಳು ರೆಡಿ ಮಾಡಿದೆವು, ನಾಳೆಯ ಚಾರಣದ ಬಗ್ಗೆ (ಅರಿಶಿನಗುಂಡಿ ಜಲಪಾತ) ಮಾತುಕತೆ ನಡೆಸಿ ಬೆಳಗ್ಗೆ ಬೇಗ ಹೊರಡುವುದೆಂದು ತೀರ್ಮಾನಿಸಿ ನಿದ್ದೆಗೆ ಜಾರಿದೆವು , ರಾತ್ತಿಯೆಲ್ಲಾ ಜೋರು ಮಳೆ.

ನಮ್ಮ ನಾಳಿನ ಪಯಣ ಅರಿಶಿನ ಗುಂಡಿ ಜಲಪಾತಕ್ಕೆ


ಹಿಡ್ಲುಮನೆ ಜಲಪಾತ (Hidluumane Falls)

DAY - 1(17-09-2016)

ಕೊಡಚಾದ್ರಿ ತುಂಬಾ ದಿನಗಳಿಂದ ಪಟ್ಟಿಯಲ್ಲಿದ್ದ ಚಾರಣ ಸ್ಥಳ , ಕೊನೆಯದಾಗಿ ಸೆಪ್ಟೆಂಬರ್ 17 ರಂದು ದಿನ ನಿಗಧಿಯಾಯಿತು. ಯೋಜನೆ ಪ್ರಕಾರ ಮೊದಲ ದಿನ ಹಿಡ್ಲುಮನೆ ಜಲಪಾತಕ್ಕೆ ಚಾರಣ ಅಲ್ಲಿಂದ ಕೊಡಚಾದ್ರಿ ಹೋಗಿ ಬರುವಾಗ ಅರಿಶಿನಗುಂಡಿ ಜಲಪಾತಕ್ಕೆ ಹೋಗುವುದೆಂದು ತೀರ್ಮಾನವಾಯಿತು. ಒಟ್ಟು ಆರು ಜನ  ದಿನಕರ್ , ರತ್ನಾಕರ್ ಮತ್ತು ನಾನು ಬೆಂಗಳೂರಿನಿಂದ , ಧನರಾಜ್ ಚಿಕ್ಕಮಗಳೂರಿನಿಂದ  ಹಾಗೂ ನರೇಶ್ ಮತ್ತು ಉಮೇಶ್ ಕುಂದಾಪುರದಿಂದ.

ನಾವು ಬೆಂಗಳೂರಿನಿಂದ ಶುಕ್ರವಾರ ರಾತ್ರಿ ತಾಳಗುಪ್ಪ ರೈಲಿನಲ್ಲಿ ಹೊರಟಿ ಶಿವಮೊಗ್ಗ ತಲುಪಿದಾಗ  ಬೆಳಿಗ್ಗೆ 4.45 ನಿಮಿಷ. ಅಲ್ಲಿಂದ ನೇರವಾಗಿ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣಕ್ಕೆ ಹೋದೆವು, ಅಲ್ಲಿ ಧನರಾಜ್ ಚಿಕ್ಕಮಗಳೂರಿನಿಂದ ಬಂದು ನಮಗಾಗಿ ಕಾಯುತ್ತಿದ್ದರು. 5.15 ರ ಕುಂದಾಪುರ ಬಸ್ (ನಿಟ್ಟೂರು, ಕೊಲ್ಲೂರು ಮೂಲಕ) ಹೊರಡಲು ರೆಡಿಯಾಗಿತ್ತು. ಬಸ್ ಹತ್ತಿ ಎಲ್ಲರೂ ಮತ್ತೆ ನಿದ್ದೆಗೆ ಜಾರಿದರೂ(ನಿದ್ದೆ ಪೂರ್ತಿ ಯಾಗಿರಲಿಲ್ಲ) ಬಸ್ ಹೊಸನಗರ ಮೂಲಕ ನಿಟ್ಟೂರು ತಲುಪಿದಾಗ ಸಮಯ 8.30 ನಿಮಿಷ. ಇಲ್ಲಿ ಬಸ್  ಹತ್ತು ನಿಮಿಷ ಟೀ ಬ್ರೆಕ್  ಗೆ ನಿಂತಿತು. ಎಲ್ಲರೂ ಟೀ ಕುಡಿದು ಪಲಾವ್ ಪಾರ್ಸಲ್ ಮಾಡಿಸಿಕೊಂಡೆವು.  ಮತ್ತೆ ಹತ್ತು ನಿಮಿಷದ ಪ್ರಯಾಣದ ನಂತರ  ಕಂಡಕ್ಟರ್ ನಮ್ಮನ್ನು ಮರಕುಟಕದ ಬ್ರಿಡ್ಜ್ ಬಳಿ ಇಳಿಸಿದರು.  ಕುಂದಾಪುರದಿಂದ ನರೇಶ್ ಮತ್ತು ಉಮೇಶ್ ನಿಟ್ಟೂರಿಗೆ ಹೋಗಿದ್ದರು. ನಾವು ಅವರಿಗೆ ಮರಕುಟಕ ಊರಿನ ಹೆಸರು ಹೇಳಿರಲಿಲ್ಲ ಆದರೆ ಈಗ ಯಾರ ಮೋಬೈಲಲ್ಲೂ  ನೆಟ್ ವರ್ಕ್ ಇರಲಿಲ್ಲ . ಅಷ್ಟರಲ್ಲಿ ಮರಕುಟಕದ ಊರಿನಿಂದ ಒಬ್ಬರು ಸ್ಕೂಟರಿನಲ್ಲಿ ನಿಟ್ಟೂರು ಕಡೆಗೆ ಹೋಗುತ್ತಿದ್ದರು.  ದಿನಕರ್ ಅವರ ಜೊತೆ ನಿಟ್ಟೂರಿಗೆ(2KM) ಹೋಗಿ ನರೇಶ್ ಮತ್ತು ಉಮೇಶ್ ರನ್ನು ಕರೆದು ಕೊಂಡು ಬಂದನು. ಇಲ್ಲಿಗೆ ನಮ್ಮ ಪೂರ್ತಿ ತಂಡ ಒಂದೆಡೆ ಸೇರಿಯಾಗಿತ್ತು. 
ಕ್ಯಾಮರಾಮನ್ ಶಾಂತರಾಜು ಜೊತೆ ದಿನಕರ್, ಧನರಾಜ್, ನರೇಶ್ , ಉಮೇಶ್ ಮತ್ತು ರತ್ನಾಕರ್ 






ಮರಕುಟಕ ಬ್ರಿಡ್ಹ್ ನಿಂದ ಕಚ್ಚಾರಸ್ತೆಯಲ್ಲಿ ನಮ್ಮ ಚಾರಣ ಶುರುವಾಯಿತು, ಮಧ್ಯೆ ಮಧ್ಯೆ ಮನೆಗಳು ಸಿಗುತ್ತಿದ್ದವು. ಅಲ್ಲಿ ಸಿಗುವ ಊರಿನವರಿಂದ ದಾರಿಯನ್ನು ಖಚಿತಪಡಿಸಿಕೊಂಡು ಮುಂದೆ ಸಾಗುತ್ತಿದ್ದೆವು, ಮಧ್ಯೆ ಒಂದು ನೀರಿನ ತೊರೆ ಸಿಕ್ಕಿತು. ಬೆಳಿಗ್ಗೆಯಿಂದ ಇನ್ನು ಬ್ರೆಷ್ ಮಾಡಿರಲಿಲ್ಲ, ಇಲ್ಲಿ ಬ್ರೆಷ್ ಮಾಡಿ ಬೆಂಗಳೂರಿನಿಂದ ತಂದಿದ್ದ ಚಪಾತಿ ಮತ್ತು ನಿಟ್ಟೂರಿನಿಂದ ತಂದಿದ್ದ ಪಲಾವ್ ತಿಂದು  ಒಂದೆರೆಡು ಫೋಟೋ ತೆಗೆದು ಮತ್ತೆ ಚಾರಣ ಶುರುಮಾಡಿದೆವು.





ಸುಮಾರು 1 ಗಂಟೆ ಚಾರಣದ ನಂತರ ರಸ್ತೆಯ ಕೊನೆಯ ಮನೆ ತಲುಪಿದೆವು. ಅಲ್ಲಿ ತಂಪಾದ ಮಜ್ಜಗೆ ಕುಡಿದು  ಅವರ ತೋಟದ ಮೂಲಕ ಸುಮಾರು ಹತ್ತು ನಿಮಿಷ ಸಾಗಿದ ನಂತರ ಮೊದಲ ಜಲಪಾತ ಕಾಣಿಸಿತು 









ಅಲ್ಲಿಂದ ಮೂರು ಜಲಪಾತ ದಾಟಿದ ಮೇಲೆ ಸಿಕ್ಕಿದ್ದೆ ಹಿಡ್ಲುಮನೆ ಜಲಪಾತ , ಜಲಪಾತ ತುಂಬಾ ಸುಂದರವಾಗಿತ್ತು ಎಲ್ಲರೂ  ಜಲಪಾತದಲ್ಲಿ ನೆನೆದು ಪೋಟೊ ಸೇಷನ್ ನಡೆಯಿತು.  







ಇಲ್ಲಿಂದ ಮುಂದಕ್ಕೆ ನಮ್ಮ ಪಯಣ ಕೊಡಚಾದ್ರಿ ಕಡೆಗೆ