ಮಧುಗಿರಿ ಕೋಟೆ ಚಾರಣ

 ಮಧುಗಿರಿ ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರ ,ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ ಬಂದಿದೆಯಂತೆ (ಮಧು + ಗಿರಿ) ! .   ಮಧುಗಿರಿ ಬೆಟ್ಟವು ಏಷ್ಯ ಖಂಡದ 2ನೇ ಅತಿ ದೊಡ್ಡ  ಏಕಶಿಲಾ ಬೆಟ್ಟ . 

  ಈ ಬೆಟ್ಟಕ್ಕೆ ಚಾರಣಕ್ಕೆ ಹೋಗಬೇಕೆನ್ನುವ ಯೋಜನೆ ತುಂಬಾ ದಿನಗಳದ್ದು,  15/07/2019 ಭಾನುವಾರ  ಒಟ್ಟು 5 ಮಂದಿ      (ನಾನು , ದಿನಕರ್ ,  ಸುಕೇಶ್ , ಲಿಂಗರಾಜು ಹಾಗೂ ದಿಲೀಪ್ ) 3 ಬೈಕಗಳಲ್ಲಿ ಬೆಳಗ್ಗೆ 8.30 ಕ್ಕೆ ಬೆಂಗಳೂರಿನಿಂದ ಹೊರೆಟೆವು (ಬೆಂಗಳೂರು -  ದಾಬಸ್ ಪೇಟೆ -  ಕೊರಟಗೆರೆ - ಮಧುಗಿರಿ)  ಮಧ್ಯ  ಊರ್ಡಿಗರೆ ಬಳಿ ಟೀ ಬ್ರೇಕ್ ನ ನಂತರ ಪ್ರಯಾಣ ಮುಂದುವರೆಯಿತು . ದಾಬಸ್ ಪೇಟೆ - ಮಧುಗಿರಿ  ರಸ್ತೆ ಯಲ್ಲಿ ಬೈಕ್ ಓಡಿಸುವುದೆ ಒಂದು ಖುಷಿ.  ನಾವು ಮಧುಗಿರಿ ತಲುಪಿದಾಗ ಸಮಯ 10.30 .  ಮಧುಗಿರಿ ನಗರ ಪ್ರವೇಶದಲ್ಲೆ  ಕೆ ಎಸ್ ಆರ್ ಟಿ ಸಿ  ಬಸ್ ನಿಲ್ದಾಣವಿದೆ ಇಲ್ಲಿ ಎಡಕ್ಕೆ ಹೋದರೆ ನೇರವಾಗಿ ಕೋಟೆಯ ಪ್ರವೇಶದ್ವಾರ ತಲುಪುತ್ತೇವೆ  ಇಲ್ಲಿಂದ 200 ಮೀ ಮುಂದಕ್ಕೆ  ರಸ್ತೆ  ಕೊನೆಯಾಗುತ್ತದೆ ಇಲ್ಲಿ ನಿಮಗೆ  ನಿಮ್ಮ ವಾಹನ ಪಾರ್ಕ್  ಮಾಡಲು ತುಂಬ ಸ್ಥಳವಿದೆ.

 ಕೆ ಎಸ್ ಆರ್ ಟಿ ಸಿ  ಬಸ್ ನಿಲ್ದಾಣದ ಪವನ್ ಹೋಟೆಲಿನಲ್ಲಿ ಚಿತ್ರಾನ್ನ ಪಾರ್ಸಲ್ ಮಾಡಿಸಿಕೊಂಡು , ನೀರಿನ ಬಾಟಲಿನೊಂದಿಗೆ ನಮ್ಮ ಚಾರಣ ಆರಂಭವಾಯಿತು.

 ಮಧುಗಿರಿ ಚಾರಣವನ್ನು ನಾಲ್ಕು ಹಂತವಾಗಿ ವಿಂಗಡಿಸಬಹುದು

ಮೊದಲನೇ ಹಂತ :  ಈ ಹಂತದಲ್ಲಿ ದೊಡ್ಡ ದೊಡ್ಡ ಮೆಟ್ಟಿಲುಗಳು ಇರುವುದರಿಂದ ಚಾರಣ ಸುಲಭವಾಗಿ ಮಾಡಬಹುದು.

ಎರಡನೇ ಹಂತ : ಈ ಹಂತದಲ್ಲಿ ಬಂಡೆಯಲ್ಲಿ ಮೆಟ್ಟಿಲುಗಳನ್ನು ಕೊರೆದಿರುತ್ತದೆ ಜೊತೆಗೆ ಹತ್ತಲು ಕಂಬಿಗಳ ಸಹಾಯ ಸಿಗುತ್ತದೆ. 

ಮೂರನೇ ಹಂತ : ಈ ಹಂತದಲ್ಲಿ ಅಲ್ಲಲ್ಲಿ ಮೆಟ್ಟಿಲುಗಳು ಸಿಗುತ್ತವೆ ಆದರೆ ಸಹಾಯಕ್ಕೆ ಕಂಬಿಗಳು ಇರುವುದಿಲ್ಲ 

ಕೊನೆಯ ಹಂತ : ಇಲ್ಲಿ ನಿಮಗೆ ಯಾವುದೇ ಮೆಟ್ಟಿಲು ಅಥವಾ ಕಂಬಿಯ ಸಹಾಯ ಸಿಗುವುದಿಲ್ಲ ಕೆಲವು ಕಡೆ ನಾಲ್ಕು ಕಾಲುಗಳ ಸಹಾಯದಿಂದ ಏರ ಬೇಕಾಗುತ್ತದೆ.























ಕೊನೆಯದಾಗಿ ನಿಮಗೆ ಸುಮಾರು 10 ಅಡಿ ಎತ್ತರದ ಕಲ್ಲಿನಿಂದ ನಿರ್ಮಿಸಿರುವ ಗೋಡೆ ಸಿಗುತ್ತದೆ. ಇಲ್ಲಿಂದ ನಿಮಗೆ ಮಧುಗಿರಿ ನಗರದ ಚಿತ್ರಣ ನೋಡಲು ಸುಂದರವಾಗಿದೆ. 

ಬೆಟ್ಟದ ತುದಿ ತಲುಪಲು ನಾವು ತೆಗೆದುಕೊಂಡ ಸಮಯ ಸುಮಾರು 2 ಗಂಟೆ (ದಿನಕರ್  ಪೋಟೋ ಶೂಟ್ ಸೇರಿ) ,  ಕೋಟೆಯ ಹಿಂಭಾಗದಲ್ಲಿ ಉಗ್ರಾಣದಂತಹ ಮಣ್ಣಿನ  ಮನೆಯ  ಪಕ್ಕದಲ್ಲಿದ್ದ ಮರದ ಕೆಳಗೆ  ದಿನಕರ್ ಮನೆಯಿಂದ ತಂದಿದ್ದ  ದೋಸೆ ಮತ್ತು ಸೌತೆಕಾಯಿ ಗೊಜ್ಜು  ಹಾಗೂ ಹೋಟೆಲಿನಿಂದ ತಂದಿದ್ದ ಚಿತ್ರಾನ್ನ ಖಾಲಿಯಾಗಿದ್ದ ನಮ್ಮ ಹೊಟ್ಟೆ ತುಂಬಿಸಿದವು. ನಂತರ ಸುಮಾರು 1 ಗಂಟೆಗಳ ಕಾಲ ಆ ತಂಪಾದ (Natural AC) ವಾತಾವರಣದಲ್ಲಿ ಕಳೆದು ಬೆಟ್ಟದ ತಪ್ಪಲಿನ ಕಡೆಗೆ ನಮ್ಮ ಚಾರಣ ಹೊರಟಿತು. ಇಳಿಯುವಾಗ ನಮಗೆ ದಾರಿಯಲ್ಲಿ 70 ವರ್ಷದ ಅಜ್ಜಿಯೊಬ್ಬರು ತಮ್ಮ ಮೊಮ್ಮಕ್ಕಳ ಜೊತೆ  ಬೆಟ್ಟ ಹತ್ತುತ್ತಿದ್ದ  ಉತ್ಸಾಹ ನೋಡಿ ನಮಗೆ ನಂಬಲಾಗಲಿಲ್ಲ. ಆಗಲೇ ಮೂರನೇ ಹಂತದಲ್ಲಿದ್ದರು, ಏಕೆಂದರೆ ನಮ್ಮ ಜೊತೆ ಚಾರಣ ಪ್ರಾರಂಬಿಸಿದ ಅನೇಕ ಗುಂಪುಗಳು ಯಾರು 2ನೇ ಹಂತದಿಂದ ಮೇಲೆ ಬರಲೇ ಇಲ್ಲ , ಎಲ್ಲಾ ವಾಪಾಸಾಗಿದ್ದರು!! .








ಬೆಟ್ಟ ಇಳಿಯಲು ಸುಮಾರು 1 ಗಂಟೆ ಬೇಕು, ಇಳಿದ ತಕ್ಷಣ ಕೋಟೆಯ ಪ್ರವೇಶದ್ವಾರದಲ್ಲಿ ನಿಂಬೂ ಸೋಡ ಕುಡಿದು ದಣಿವಾರಿಸಿಕೊಂಡು ನಮ್ಮ ಪ್ರಯಾಣ ವಾಯು ಮಾಲಿನ್ಯದ ನಾಡು , ಟ್ರಾಫಿಕ್ ನ ತವರೂರು ಬೆಂಗಳೂರಿನ ಕಡೆಗೆ ......................