ಕವಲೇದುರ್ಗ

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ತಾಣ.ತೀರ್ಥಹಳ್ಳಿಯಿಂದ 18 ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು 8೦ ಕಿ.ಮೀ ದೂರದಲ್ಲಿದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ
ಇದು ಮೂರು ಸುತ್ತಿನ ಕೋಟೆಯಾಗಿದ್ದು, ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯರೇಖೆಗಳನ್ನು ಅನುಸರಿಸಿ ಬೃಹದ್ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನುಪಯೋಗಿಸಿ ನಿರ್ಮಿಸಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಮಹಾದ್ವಾರವಿದ್ದು ಅದರ ಇಕ್ಕೆಲಗಳಲ್ಲೂ ರಕ್ಷಣಾ ಕೊಠಡಿಗಳಿವೆ. ಕೋಟೆಯ ಮದ್ಯದಲ್ಲಿ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ. ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ಶ್ರೀಕಂಠೇಶ್ವರ ದೇವಸ್ಥಾನವಿದೆ. ದೇವಸ್ಥಾನವು ಗರ್ಭಗೃಹವನ್ನು ಹೊಂದಿದ್ದು ಎದುರಿಗೆ ಒಂದು ನಂದಿಮಂಟಪ ಮತ್ತು ಮುಖಮಂಟಪವಿದೆ. ಸೂರ್ಯಾಸ್ತದ ಸಮಯದಲ್ಲಿ ಇಲ್ಲಿಂದ ಮುಳುಗುವ ಸೂರ್ಯನ ಸುಂದರ ನೋಟ ಕಾಣಸಿಗುವುದು.















ಕುಪ್ಪಳ್ಳಿ ‘ಕವಿಮನೆ’


ಕುಪ್ಪಳ್ಳಿ - ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪುರವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಅದೇ ‘ಕವಿಮನೆ’, ಇದು ಒಂದು ಪ್ರವಾಸೀ ಸ್ಥಳವಾಗಿಯೂ ರೂಪುಗೊಂಡಿದೆ. ಮೂರು ಮಾಳಿಗೆಯನ್ನು ಹೊಂದಿರುವ ಮನೆಯನ್ನು ಮೂಲರೂಪದಲ್ಲೇ ಉಳಿಸಿಕೊಳ್ಳಲಾಗಿದ್ದು, ಈ ಮನೆಯಲ್ಲಿ ಪೂರ್ವಜರು ಬಳಸುತ್ತಿದ್ದ ಬೀಸುವ ಕಲ್ಲು, ಬುಟ್ಟಿಗಳು, ಪೆಟ್ಟಿಗೆಗಳು, ಕುಕ್ಕೆ, ಹೊರಳುಕಲ್ಲು, ಮಚ್ಚು, ಹಂಡೆ, ಪಾತ್ರೆ-ಪಗಡಿ, ಬಟ್ಟೆ-ಬರೆ, ಕುವೆಂಪು ಅವರಿಗೆ ಸಂದ ಸನ್ಮಾನ ಪತ್ರಗಳು, ಗೌರವ ಡಾಕ್ಟರೇಟುಗಳು, ಅವರ ಪುಸ್ತಕಗಳು, ಅವರ ಬಗ್ಗೆ ಬಂದಿರುವ ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳನ್ನು ಜೋಡಿಸಿಡಲಾಗಿದೆ. ಈ ಮನೆಯನ್ನು ನೋಡಲು ಸುಮಾರು 1 ಗಂಟೆ ಬೇಕು. ಸ್ವಲ್ಪ ದೂರದಲ್ಲಿ ಕವಿಶೈಲವಿದೆ. ಅಲ್ಲಿ ಕುವೆಂಪುರವರ ಸಮಾಧಿ ಇದೆ














ದೊಡ್ಡಮನೆ ಆಗುಂಬೆ

ಕರ್ನಾಟಕದ ಚಿರಾಪುಂಜಿ ಎನಿಸಿಕೊಂಡ ಹಸಿರ ಸೊಬಗಿನ ಸುಂದರ ತಾಣ ಆಗುಂಬೆ, ಆಗುಂಬೆಯ ಪೇಟೆಯ ಮುಖ್ಯರಸ್ತೆ ಬಳಿ ಕಾಣಸಿಗುತ್ತದೆ ವಿಶಾಲವಾದ ಎರಡು ಮಹಡಿಗಳ ದೊಡ್ಡಮನೆ. 1986ರಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಶಂಕರನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್‌' ಧಾರಾವಾಹಿಯ ಬಹುಪಾಲು ಚಿತ್ರೀಕರಣವಾಗಿದ್ದು ಇದೇ ಆಗುಂಬೆಯಲ್ಲಿರುವ ಈ ದೊಡ್ಮನೆಯಲ್ಲಿ, ಮಂಗಳೂರು ಹೆಂಚು ಹೊದೆಸಿದ ಈ ಮನೆಯ ಗೋಡೆ ಕಲ್ಲಿನದು. ಒಳಗೆ ಫಳಫಳ ಹೊಳೆಯುವ ಮರದ ಕಂಬಗಳಿವೆ. ಸುಂದರ ಕೆತ್ತನೆಯ ತೊಲೆಗಳಿವೆ. ವಿಶಾಲವಾದ ಒಳಾಂಗಣವಿದೆ. ಮರದಿಂದ ನಿರ್ಮಿಸಿದ ಕೆತ್ತನೆಯ ಬಾಗಿಲುಗಳು ಚೌಕಟ್ಟುಗಳು ನಯನ ಮನೋಹರ. ಉಳಿದುಕೊಳ್ಳಲು ವಿಶಾಲವಾದ ಕೊಠಡಿಗಳಿವೆ, ಇಲ್ಲಿನ ಊಟ ಮತ್ತೊಂದು ವಿಶೇಷ , ಕಸ್ತೂರಿ ಅಕ್ಕ ಬಡಿಸುವ ರೀತಿ ನಮ್ಮ ಮನೆಯ ಅಮ್ಮನೊ , ಅಜ್ಜಿನೋ ಬಡಿಸುವ ತರಹ ಇರುತ್ತದೆ , ರುಚಿಯಾದ ಮಲೆನಾಡಿನ ಬಾಳೆಎಲೆ ಊಟ ಮತ್ತು ಕೊನೆಯಲ್ಲಿ ಕಷಾಯ ಅದ್ಬುತ . ಮತ್ತೆ ಇಲ್ಲಿ ಉಳಿದುಕೊಳ್ಳುವುದಕ್ಕೆ ಮತ್ತು ಊಟಕ್ಕೆ ಇವರು ಹಣ ನಿಗದಿ ಮಾಡಿಲ್ಲ ಹೊರಡುವಾಗ ನಮಗೆ ಇಷ್ಟ ಬಂದಷ್ಟು ಕೊಟ್ಟರೆ ಸಂತೋಷವಾಗಿ ಸ್ವೀಕರಿಸುತ್ತಾರೆ. ಆಗುಂಬೆ ಕಡೆ ಹೋದಾಗ ತಪ್ಪದೆ ದೊಡ್ಮನೆ ಕಸ್ತೂರಿ ಅಕ್ಕ ರವರ ಆತಿಥ್ಯ ಸ್ವೀಕರಿಸಿ . Phone : 08181-233075 , 9448603343











ಕುಂದಾದ್ರಿ (Kundadri)

ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿದೆ. ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ಮಾರ್ಗದಲ್ಲಿ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಈ ಬೆಟ್ಟದ ಮೇಲೆ ಜೈನ ಬಸದಿ ಇದೆ. ಅಲ್ಲಿ ಶ್ರೀ ಪಾರ್ಶ್ವನಾಥರ ಮೂರ್ತಿ ಇದೆ . ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ. ದೂರದಲ್ಲೋ ಕಾಣುವ ಮೋಡ ಈ ಕುಂದಾದ್ರಿಯ ಮೇಲೆ ನಿಂತರೆ ನಿಮ್ಮ ಮಧ್ಯೆ, ನಿಮ್ಮನ್ನು ಸೀಳಿಕೊಂಡೇ ಹೋಗುತ್ತದೆ. ಅದೊಂದು ಹೊಸ ಅನುಭವ ಕೊಡುವ ಸ್ಥಳ. ಇಲ್ಲೇ ಸಣ್ಣ ಪುಷ್ಕರಣಿ ಇದ್ದು, ಅಲ್ಲಿ ವರ್ಷದ 365 ದಿನವೂ ನೀರು ಇರುವುದು ವಿಶೇಷ. ಇನ್ನೊಂದು ಪುಟ್ಟದಾದ ತಾವರೆಕೆರೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ.