ಕೂಸಳ್ಳಿ ಜಲಪಾತ


    ಉಡುಪಿಯಿಂದ 80 ಕಿ.ಮೀ ದೂರ ಕಾರವಾರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರೂರು ಇದೆ. ಶಿರೂರಿನಲ್ಲಿ ಬಲಕ್ಕೆ ತೂದಳ್ಳಿ ಮುಖ್ಯರಸ್ತೆಯಲ್ಲಿ  8 ಕಿ. ಮೀ ಚಲಿಸಿದ ನಂತರ  ರಸ್ತೆ  ಕವಲೊಡೆಯುತ್ತದೆ.  ಇಲ್ಲಿ ನೇರವಾಗಿ ಸಿಮೆಂಟ್  ರಸ್ತೆ ಯಲ್ಲಿ 1/2 ಕಿ.ಮೀ ಕ್ರಮಿಸಿದರೆ  ಮತ್ತೆ ಕವಲು ರಸ್ತೆ ಸಿಗುತ್ತದೆ ಇಲ್ಲಿ ಎಡಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ  3 ಕಿ.ಮೀ ಪ್ರಯಾಣಿಸಿದರೆ ಕೂಸಳ್ಳಿ ಯ ಕೊನೆಯ ಮನೆಯ ಹತ್ತಿರ ರಸ್ತೆ ಕೊನೆಯಾಗುತ್ತದೆ. ಇಲ್ಲಿಂದ 4 ಕಿ.ಮೀ ಕಾಡಿನಲ್ಲಿ ನಡೆದರೆ ಕೂಸಳ್ಳಿ ಜಲಪಾತ ತಲುಪಬಹುದು.


ನಾವು ಮರವಂತೆಯಿಂದ ನೇರವಾಗಿ ಶಿರೂರಿಗೆ ಬಂದೆವು , ಇಲ್ಲಿನ ಮೂಕಾಂಬಿಕಾ ಹೋಟೆಲಿನಲ್ಲಿ ಮದ್ಯಾಹ್ನಕ್ಕೆ ಊಟ ಪಾರ್ಸಲ್ ಮಾಡಿಸಿಕೊಂಡು ಜಿಗಣೆಗಳಿಗಾಗಿ ಉಪ್ಪು ಮತ್ತು ಸುಣ್ಣ ತೆಗೆದುಕೊಂಡು ಮೇಲೆ ತಿಳಿಸಿದಂತೆ ತೂದಳ್ಳಿ ಮುಖ್ಯರಸ್ತೆಯಲ್ಲಿ ಮಳೆಯ ಜೊತೆ  ಪ್ರಯಾಣ ಮುಂದುವರೆಯಿತು.





ಸುಮಾರು  30 ನಿಮಿಷದಲ್ಲಿ ಕೂಸಳ್ಳಿಯ ಕೊನೆಯ ಮನೆ ತಲುಪಿದೆವು . ಮನೆಯವರ ಅನುಮತಿ ಪಡೆದು ಅವರ ಮನೆಯ  ಆವರಣದಲ್ಲಿ  ನಮ್ಮ ಬೈಕ್ ಗಳನ್ನು ಮತ್ತು ಅಲ್ಲೆ ಕಟ್ಟೆಯ ಮೇಲೆ ನಮ್ಮ ಬ್ಯಾಗ್ ಗಳನ್ನು ಇಟ್ಟು  ಊಟದ ಕವರ್ ಮತ್ತು ಕ್ಯಾಮರ ತೆಗೆದು ಕೊಂಡು ಹೊರಡಲು ರೆಡಿಯಾದೆವು . ಮನೆಯವರು ಜಲಪಾತಕ್ಕೆ ಹೋಗುವ ದಾರಿಯನ್ನು ವಿವರಿಸಿದರು. ಅದರಂತೆ ಅವರ ಮನೆಯ ಎದುರಿಗೆ ಇರುವ ಜಲಪಾತದ ನಾಮಫಲಕದ ಪಕ್ಕದ ಕಾಲುದಾರಿಯಲ್ಲಿ ನಮ್ಮ ಚಾರಣ  ಆರಂಭಿಸಿದೆವು, ನಮ್ಮ ಜೊತೆ ಮನೆಯವರ ನಾಯಿ ಕೂಡ ಹೊರಟಿತು.



ಕೂಸಳ್ಳಿಯ ಕೊನೆಯ ಮನೆ


ಶ್ವಾನದಿಂದ ತಂಡದ ಸದಸ್ಯರಿಗೆ ಚಾರಣದ ಬಗ್ಗೆ ಮಾಹಿತಿ







 ಸ್ವಲ್ಪ ಸಮಯ ನಡೆದ ನಂತರ  ಮನೆಯವರು ತಿಳಿಸಿದಂತೆ ನಮಗೆ ಎಡಕ್ಕೆ ಹೋಗುವ ದಾರಿ ಸಿಗಲಿಲ್ಲ (ನಮ್ಮ ಗಮನಕ್ಕೆ ಬಂದಿರಲಿಲ್ಲ)  ಮುಂದೆ ಕಾಲು ದಾರಿ ಬಲಕ್ಕೆ ತಿರುಗಿತು ನಾವು ಮತ್ತೆ ಹಿಂದಕ್ಕೆ ಬಂದು ಎಡಭಾಗದ ದಾರಿ ಹುಡುಕುತ್ತಿರುವಾಗ ನಾಯಿಯು ಒಂದು ಕಡೆ ಎಡಕ್ಕೆ ತಿರುಗಿತು ಗುಂಪಿನಲ್ಲಿ ಒಬ್ಬರು ನಾಯಿಗೆ ದಾರಿ ಗೊತ್ತಿರುತ್ತದೆ ಎಂದರು. ಎಲ್ಲರೂ ನಾಯಿ ಹೊರಟ ದಾರಿಯನ್ನು ಅನುಸರಿಸಿ ಹೊರೆಟೆವು. ಅಲ್ಲಿ ಯಾವುದೇ ಕಾಲು ದಾರಿ ಇರಲಿಲ್ಲ, ಮರಗಳ ನಡುವೆ ಮುಳ್ಳಿನ ಬಳ್ಳಿಗಳ ಮಧ್ಯೆ  ನಡೆಯುತ್ತಿದ್ದೆವು.




ನಾಯಿಯನ್ನು ಅನುಸರಿಸಿದ ದಾರಿ



















ನರೇಶ್ ಮತ್ತು ಧನರಾಜ್ ನಾಯಿಯನ್ನು ಸುರಕ್ಷಿತವಾಗಿ ನೀರನ್ನು ದಾಟಿಸಿದ ಕ್ಷಣ


ನಾಯಿ ನಮ್ಮನ್ನು ಸುಮಾರು 1 ಗಂಟೆ ಕಾಲ ಕಾಡಿನಲ್ಲಿ  ಸುತ್ತಾಡಿಸಿತು. ಜಲಪಾತದ ಯಾವುದೇ ಸೂಚನೆ ಸಿಗಲಿಲ್ಲ. ನಾಯಿ ನಂಬಿ ಬಂದ ನಾವು ಸಂಪೂರ್ಣವಾಗಿ ದಾರಿ ತಪ್ಪಿದ್ದೆವು( ನರೇಶ್ ರವರ ಮೋಬೈಲ್ ನಿಂದ "ಗಗನವು ಎಲ್ಲೋ ಭೂಮಿಯೂ ಎಲ್ಲೋ" ಹಾಡು ಕೇಳಿಸುತ್ತಿತ್ತು). ಆಗಲೇ ಸಮಯ ಸುಮಾರು 2 ಗಂಟೆ ಯಾಗಿತ್ತು. ಇನ್ನು ಸಮಯ ವ್ಯರ್ಥ ಮಾಡಿದರೆ ಹಿಂದಿರುಗುವಾಗ ಕತ್ತಲಾಗಬಹುದೆಂಬ ಆತಂಕ ಮೂಡಿತು. ಏನು ಮಾಡುವುದೆಂದು ಯೋಚಿಸುತ್ತಿರುವಾಗ ತಂದಿದ್ದ  ಊಟವಾದರೂ ಮಾಡೋಣವೆಂದು  ಅಲ್ಲೆ ಹರಿಯುತ್ತಿದ್ದ ನೀರಿನ ತೊರೆಯ ಬಳಿ ಊಟಕ್ಕೆ ಕುಳಿತೆವು. ನಾಯಿಯು ಸಹ ನಮ್ಮಜೊತೆ ಕಾಡಿನಲ್ಲಿ ಸುತ್ತಿ ನಮ್ಮಂತೆ ಸುಸ್ತಾಗಿತ್ತು ಒಂದು ಪಾಲು ಊಟ ಅದಕ್ಕೂ ಬಡಿಸಿದೆವು.

ಇದು ಊಟದ ಸಮಯ ಆನಂದಮಯ


ಊಟ ನೀಡಿದ ದಿನೇಶ್ ಗೆ ನಾಯಿಯಿಂದ ಸಿಹಿ ಮುತ್ತು










ನಾವು ಊಟ ಮಾಡಿದ ಸ್ಥಳದಿಂದ ಜಲಪಾತ ದೃಶ್ಯ
ಊಟದ ನಂತರ ಹಿಂದಕ್ಕೆ ಹೊರಡುವುದೆಂದು ತೀರ್ಮಾನಿಸಿ ಬಂದ ದಾರಿಯಲ್ಲಿ ಹಿಂದಕ್ಕೆ ಹೊರೆಟೆವು ( ಅದೂ ಕೂಡ ಸರಿಯಾಗಿ ತಿಳಿದಿರಲಿಲ್ಲ!!!) ಜಲಪಾತ ನೋಡದೆ ಹಿಂದಕ್ಕೆ ಹೊರಟಿದ್ದು ಎಲ್ಲರಲ್ಲೂ ನಿರಾಸೆ ಮೂಡಿಸಿತ್ತು. ಹಿಂದಿರುಗುತಿದ್ದಾಗ ಕೊನೆಗೂ ಒಂದು ಕಾಲು ದಾರಿ ಸಿಕ್ಕಿತು!. ಈಗ  ಎಲ್ಲರಲ್ಲೂ ಹೊಸ  ಉತ್ಸಾಹ ಮೂಡಿತು. ಎಲ್ಲರೂ ಜಲಪಾತದ ಕಡೆಗೆ ಹೆಜ್ಜೆ ಹಾಕಿದೆವು. ಮುಂದಿನ 30 ನಿಮಿಷದಲ್ಲಿ ಜಲಪಾತ ಬಳಿ ತಲುಪಿದ್ದೆವು.  ಜಲಪಾತದಲ್ಲಿ ನೀರಿನ ರಭಸ ಜೋರಾಗಿತ್ತು  ಮತ್ತು ನೋಡಲು ಮನೋಹರವಾಗಿತ್ತು. ಸುಮಾರು ಸಮಯ ಜಲಪಾತದ ಬಳಿ ಕಳೆದೆವು ಹಾಗೂ ಸಾಕಷ್ಟು ಪೋಟೋಗಳನ್ನು ತೆಗೆದ ನಂತರ ಹೊರೆಟೆವು.
















ನಾಯಿಯೊಂದಿಗೆ ತಂಡದ ಸದಸ್ಯರ ಸೆಲ್ಫಿ  ಜಲಪಾತದ ಬಳಿ















ಜಲಪಾತದಿಂದ ನಾವು ಗಾಡಿಗಳನ್ನು ನಿಲ್ಲಿಸಿದ್ದ ಮನೆಗೆ ಬರಲು ತೆಗೆದುಕೊಂಡಿದ್ದು ಕೇವಲ 40 ನಿಮಿಷಗಳು , ಮನೆಯ ಬಳಿ ಬಂದಾಗ ಸಮಯ ಸುಮಾರು 4 ಗಂಟೆಯಾಗಿತ್ತು. ಮನೆಯವರ ಬಳಿ ನೀರನ್ನು ಪಡೆದು ಕುಡಿದೆವು, ಅವರಿಗೆ ನಾವು ದಾರಿ ತಪ್ಪಿದ ಅನುಭವ ಹಾಗೂ ಅವರ ನಾಯಿ ಕೂಡ ನಮ್ಮ ಜೊತೆ ಬಂದ ವಿಷಯ ತಿಳಿಸಿದಾಗ ಅವರು ಆಶ್ಚರ್ಯದಿಂದ ನಾಯಿ ಇಲ್ಲಿಯವರೆಗೆ ಯಾರೊಂದಿಗೂ ಹೋಗಿರಲಿಲ್ಲ ಎಂದಾಗ ನಮಗೂ ಆಶ್ಚರ್ಯವಾಯಿತು. ಮನೆಯವರಿಗೆ ಧನ್ಯವಾದ ತಿಳಿಸಿ ಹೊರೆಟೆವು.

 ಹೋಗುವ ದಾರಿಯಲ್ಲಿ  ಕಾಣಿಸಿದ ಕೂಸಳ್ಳಿ ಜಲಪಾತದ ದೃಶ್ಯ




" ಬುಲೆಟ್ ಸದ್ದಿನೊಂದಿಗೆ ನಮ್ಮ ಮುಂದಿನ ಪಯಣ ಭೀಮೇಶ್ವರ ಜಲಪಾತದ ಕಡೆಗೆ ಸಾಗಿತು"












2 comments: