ಕೇದಾರನಾಥ್

  ಯೋಜನೆಯಂತೆ ಬೆಳಗ್ಗೆ 5ಗಂಟೆಗೆ ಹರಿದ್ವಾರದಿಂದ ಬಸ್ಸಿನಲ್ಲಿ ನಮ್ಮ ಪ್ರಯಾಣ ಗೌರಿ ಕುಂಡದ ಕಡೆಗೆ ಆರಂಭವಾಯಿತು.


ದೇವಪ್ರಯಾಗದ ಸಮೀಪ ಡಾಬ ಹೊಂದರಲ್ಲಿ ತಿಂಡಿ ತಿಂದೆವು ಪ್ರಯಾಣ ಮುಂದುವರೆಯಿತು


ಶ್ರೀನಗರ ಮುಖಾಂತರ ರುದ್ರಪ್ರಯಾಗ ತಲುಪಿದೆವು.  ರುದ್ರಪ್ರಯಾಗ ಮಂದಾಕಿನಿ ಮತ್ತು ಅಲಕಾನಂದ ನದಿ ಸೇರುವ ಸ್ಥಳ. ಇಲ್ಲಿ ರಸ್ತೆ ಕವಲೊಡುಯುತ್ತದೆ ಬದರಿನಾಥ ಕಡೆಗೆ ಹೋಗುವ ಹೆದ್ದಾರಿ ಮತ್ತೊಂದು ಕೇದಾರನಾಥಕ್ಕೆ ಹೋಗುವ ದಾರಿ. ಮುಂದೆ ಗುಪ್ತಕಾಶಿ ಮೂಲಕ ಸ್ವರ್ಣ ಪ್ರಯಾಗ ತಲುಪಿದೆವು. ಇಲ್ಲಿಂದ ಗೌರಿಕುಂಡಕ್ಕೆ  5 ಕಿ.ಮೀ ಜೀಪಿನಲ್ಲಿ ಪ್ರಯಾಣಿಸಬೇಕು. ಸ್ವರ್ಣ ಪ್ರಯಾಗದಲ್ಲಿ ಯಾತ್ರೆಗೆ ನಮ್ಮ ಹೆಸರು ನೊಂದಣಿ ಮಾಡಿಸಿ ಐಡಿ ಗಳನ್ನು ಪಡೆದೆವು. ಜೀಪು ಹೊರಡಲು ಸಮಯವಿತ್ತು. ಅಲ್ಲೆ ಒಂದು ಅಂಗಡಿಯಲ್ಲಿ ಬಿಸಿ ಬಿಸಿ ಚಹಾ ಜೊತೆಗೆ PArle G ಬಿಸ್ಕತ್ ತಿಂದೆವು ಇಲ್ಲಿ ನಮಗೆ ರಾಜಸ್ತಾನದಿಂದ  ಬೈಕಿನಲ್ಲಿ ಬಂದಿದ್ದ ಸಂಜಯ್ ಅರೋರಾ ಅವರ ಪರಿಚಯವಾಯಿತು. ಅವರು ಆಗಲೇ ಯಮುನೋತ್ರಿ , ಗಂಗೋತ್ರಿ ದರ್ಶನ ಮಾಡಿ ಕೇದಾರನಾಥಕ್ಕೆ ಬಂದಿದ್ದರು.  ಜೀಪ್ ನಲ್ಲಿ ತುಂಬಾ ಕಿರಿದಾದ ರಸ್ತೆಯಲ್ಲಿ 5 ಕಿ.ಮೀ ಪ್ರಯಾಣದ ನಂತರ ಗೌರಿಕುಂಡ್ ತಲುಪಿದೆವು. ಇದು ಪ್ರವಾಸದ ಸೀಸನ್ ಆಗಿಲ್ಲದ ಕಾರಣ ಕಡಿಮೆ ದರಕ್ಕೆ ರೂಂ ಬಾಡಿಗೆಗೆ  ದೊರೆಯಿತು(200 ರೂ) ಸೀಸನ್ ನಲ್ಲಿ (ಮೇ - ಜೂನ್) ಇದರ ಬೆಲೆ 2000 ರೂ ಗಳು. ಆಗಲೇ ಸಮಯ 6 ಗಂಟೆಯಾಗಿತ್ತು ಸತತ 12 ಗಂಟೆಗಳ ಪ್ರಯಾಣ ಮಾಡಿದ್ದೆವು . ನಮ್ಮ ಲಗೇಜ್ ಗಳನ್ನು ರೂಮಿನಲ್ಲಿ  ಇಟ್ಟು ನೇರವಾಗಿ ಗೌರಿಕುಂಡನ ಬಿಸಿ ನೀರಿನ ಬುಗ್ಗೆ ಕಡೆಗೆ ಹೊರೆಟೆವು. 2013 ರ ಮೊದಲು ಬಿಸಿ ನೀರಿನ ಕುಂಡವಿತ್ತು. ಅದು 2013ರ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈಗ ಬಿಸಿ ನೀರಿನ ಬುಗ್ಗೆಗೆ ಪೈಪ್ ಅಳವಡಿಸಲಾಗಿದೆ. ನೀರು ಬಹಳ ಬಿಸಿ ಇತ್ತು ಸುಮಾರು 1/2 ಗಂಟೆಗಳ ಕಾಲ ನೀರಿನಲ್ಲಿ ಕಳೆದೆವು.


 ನಮ್ಮ 12 ಗಂಟೆಗಳ ಪ್ರಯಾಣದ  ಆಯಾಸವೆಲ್ಲಾ ಮಾಯವಾಗಿತ್ತು, ನಂತರ ಗೌರಿ ದೇವಾಲಯಕ್ಕೆ ಬೇಟಿ ಕೊಟ್ಟು ದರ್ಶನ ಪಡೆದು ಗೌರಿಕುಂಡದ ಬೀದಿಗಳನ್ನು ಒಂದು ಸುತ್ತು ಹಾಕಿ ರೂಮಿಗೆ ಹಿಂತಿರುಗಿದೆವು.

ವಸತಿಗೃಹದಲ್ಲಿ ಊಟ (ರೋಟಿ +ದಾಲ್) ರೆಡಿಯಾಗಿತ್ತು ಊಟ ಮುಗಿಸಿ ನಾಳಿನ ಪ್ರಯಾಣದ ಬಗ್ಗೆ ಚರ್ಚಿಸಿ ನಿದ್ದೆಗೆ ಜಾರಿದೆವು.
ಯೋಜನೆಯಂತೆ ಬೆಳಗ್ಗೆ 4.30 ಗಂಟೆಗೆ ಎದ್ದು ಬಿಸಿ ನೀರಿನ ಬುಗ್ಗೆಯಲ್ಲಿ  ಸ್ನಾನ ಮುಗಿಸಿ ಹೊರಟಾಗ  5.30 ನಿಮಿಷ , ಅಲ್ಲೆ ಅಂಗಡಿಯಲ್ಲಿ ಚಾರಣಕ್ಕೆ ಬೇಕಾದ ಕೋಲನ್ನು ಪಡೆದೆವು. ಆಗಲೇ ಸುಮಾರು ಜನ ಚಾರಣ ಶುರು ಮಾಡಿದ್ದರು. ಕೆಲವರು ಕುದುರೆಗಳಲ್ಲಿ ಹೋಗುತ್ತಿದ್ದರು. 



ಕುದುರೆಯವರು ಕುದುರೆಗಳಲ್ಲಿ ಬರುವಂತೆ ಕೇಳುತ್ತಿದ್ದರು "ಗೋಡ ಚಾಯಿಯೆ" ಎಂಬ ಪದ ಕೇಳಿ ಕೇಳಿ ನಮಗೂ ಬಾಯಿ ಪಾಠವಾಗಿತ್ತು.  ಚಾರಣದ ಹಾದಿ ಉದ್ದಕ್ಕೂ ಸುಂದರ ಜಲಪಾತಗಳು ಸುತ್ತ ಮುತ್ತಲಿನ ಹಸಿರು ಪರಿಸರದ ಜೊತೆಗೆ ಚಾರಣ ಮುಂದುವರೆಯಿತು 






ಸುಮಾರು 1 ಗಂಟೆ ಚಾರಣದ ನಂತರ ಮೊಟ್ಟ ಮೊದಲ ಬಾರಿಗೆ ಹಿಮ ಪರ್ವತದ ದರ್ಶನವಾಯಿತು. ಆ ಹಿಮಚ್ಛಾದಿತ ಗಿರಿಶಿಖರ ಎಂದೆಂದಿಗೂ ನಮ್ಮ ಮನದಿಂದ ಮಾಯವಾಗಲು ಸಾಧ್ಯವಿಲ್ಲ. 


ಮುಂದೆ ಬೆಳಗಿನ  ಉಪಹಾರಕ್ಕೆ ಪರೋಟ ತಿಂದು ಸ್ಚಲ್ಪ ವಿಶ್ರಾಂತಿ ಪಡೆದು ಮತ್ತೆ ಚಾರಣ ಶುರು ಮಾಡಿದೆವು. ಆಗಸದಲ್ಲಿ ಹೆಲಿಕಾಪ್ಟರ್ ಗಳ ಹಾರಾಟ ಶುರುವಾಯಿತು .ಸೋನ ಪ್ರಯಾಗದಿಂದ ಕೇದಾರನಾಥ ದೇವಾಲಯದ ಸಮೀಪದವರೆಗೂ ಹೆಲಿಕಾಪ್ಟರ್ ಸೇವೆ ಇದೆ.  ಸುಮಾರು 25 ಕಿ.ಮೀ ಹಾದಿಯ ಹಾರಾಟಕ್ಕೆ ತಗಲುವ ಸಮಯ 15-20 ನಿಮಿಷ (ಚಾರಣಕ್ಕೆ ಬೇಕಾಗುವ ಸಮಯ 7 ಗಂಟೆ) ಆದರೆ ದರ ಮಾತ್ರ ದುಬಾರಿ(7500 ರೂ) ಆದರೆ ಇದರಿಂದ ಪರಿಸರದ ನೈರ್ಮಲ್ಯಕ್ಕೆ ದಕ್ಕೆ ಮತ್ತು ಸುತ್ತ ಮುತ್ತಲಿನ ಕಾಡು ಪ್ರಾಣಿಗಳಿಗೂ ತೊಂದರೆ.
ನಮ್ಮ ಅಂದಾಜಿನ ಪ್ರಕಾರ 12ಕ್ಕೆ ತಲುಪಬಹುದೆಂದು ಆದರೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಸುಮಾರು 8 ಕಿ.ಮೀ ದಾರಿ ಕ್ರಮಿಸಿದ್ದೆವು ಇನ್ನು 7 ಕಿ.ಮೀ ಹಾದಿ ಬಾಕಿಯಿತ್ತು ಆಗಲೇ ನಮ್ಮಲ್ಲಿನ ಚೈತನ್ಯ ಕಡಿಮೆಯಾಗಿತ್ತು ಈಗ ವಿಶ್ರಾಂತಿಗಾಗಿ ನಿಲ್ಲುವುದು ಜಾಸ್ತಿಯಾಗಿತ್ತು.  ಅದರ ಜೊತೆಗೆ ಪೋಟೋಗಾಗಿ ಬಹಳ ಸಮಯ ವ್ಯಯವಾಗುತ್ತಿತ್ತು










  ಮತ್ತೆ ಎನರ್ಜಿಗಾಗಿ ಹೋಟೆಲ್ ಮೊರೆ ಹೋದೆವು ಅಲ್ಲಿ ಟೀ ಬಿಸ್ಕತ್ ಮತ್ತು ಮ್ಯಾಗಿ ತಿಂದೆವು ಆ ಕ್ಷಣಕ್ಕೆ ಮ್ಯಾಗಿ ಭೂಮಿ ಮೇಲಿನ ಅತ್ಯಂತ ರುಚಿಯಾದ ಆಹಾರವಾಗಿ ಕಂಡಿತು !!! 


ಈಗ ನಮ್ಮ ಚಾರಣ ಸ್ವಲ್ಪ ಚುರುಕಾಯಿತು  ಮತ್ತು ಚಾರಣದ ರಸ್ತೆ ಬಿಟ್ಟು ಮದ್ಯೆ ಇರುವ ಅಡ್ಡದಾರಿಯಲ್ಲಿ(Shortcut) ಏರಲು ಶುರುಮಾಡಿದೆವು , ಕೊನೆಯದಾಗಿ 1.5  ಕಿ.ಮೀ ನಾಮಫಲಕ ಕಂಡಾಗ ನಮ್ಮಲ್ಲಿ ಹೊಸ ಉತ್ಸಾಹ ಮೂಡಿತು.


 ನಮ್ಮ ಹೆಜ್ಜೆಗಳು ಚುರುಕಾದವು ಮುಂದಿನ 10 ನಿಮಿಷದಲ್ಲಿ ದೇವಾಲಯದ ಸಮೀಪ ಬಂದಿದ್ದೆವು. ಶಿವಾಲಯವು ಬಹು ರಮಣೀಯವಾಗಿದ್ದು ಹಿನ್ನೆಲೆಯಲ್ಲಿ ಅಸಂಖ್ಯಾತ ಹಿಮ ಪರ್ವತಗಳನ್ನು ಕಾಣಬಹುದು. ಕೇದಾರನಾಥ ಶ್ರೀ ಶಂಕರಚಾರ್ಯರು ದೇಹ ತ್ಯಾಗ ಮಾಡಿದ ಸ್ಥಳ  ಇಲ್ಲಿ ಹಲವಾರು ಸಾಧು ಸಂತರನ್ನು ಕಾಣಬಹುದು (15 ಜೂನ್ 2013 ರಂದು ಉಂಟಾದ ಮೇಘ ಸ್ಪೋಟದಲ್ಲಿ ಕೇದಾರನಾಥ ದೇವಾಲಯದ ಸುತ್ತಮುತ್ತಲಿನ  ಎಲ್ಲ ಕಟ್ಟಡಗಳೂ  ನೆಲಸಮವಾಗಿತ್ತು  ದೇವಾಲಯ ಮಾತ್ರ ಉಳಿದುಕೊಂಡಿತ್ತು) 



ದೇವರ ದರ್ಶನಕ್ಕೆ ಜನ ಜಂಗುಳಿ ಇರಲಿಲ್ಲ ಸುಮಾರು 15 ನಿಮಿಷ ದಲ್ಲಿ ದರ್ಶನ ಮುಗಿಸಿ ಹೊರೆಗೆ ಬಂದೆವು. ಈಗ ಕ್ಯಾಮಾರಗಳ ಕೆಲಸ ಶುರುವಾಯಿತು. ಸುತ್ತಮುತ್ತಲಿನ ಪರಿಸರದ  ಎಷ್ಟು ಪೋಟೋ ತೆಗೆದರು ತೃಪ್ತಿಯಾಗುತ್ತಿರಲಿಲ್ಲ.





  ಪೋಟೋ ಸೆಷನ್ ಮುಗಿಸಿ ಅಲ್ಲೆ ಒಂದು ಹೋಟೆಲಿನಲ್ಲಿ ಆಲು ಪರೋಟ ತಿಂದು ಹೊರೆಟೆವು. ಅಷ್ಟರಲ್ಲಿ ಜಿಟಿ ಜಿಟಿ ಮಳೆ ಆರಂಭವಾಯಿತು. ಮಳೆಯಲ್ಲಿ  ನಮ್ಮ ಚಾರಣ ಗೌರಿಕುಂಡದ ಕಡೆಗೆ ಶುರುವಾಯಿತು ಆಗ ಸಮಯ ಸುಮಾರು 3 ಗಂಟೆ . 

ಸುಮಾರು 5 ಗಂಟೆಗಳ ಚಾರಣದ ನಂತರ ಗೌರಿಗುಂಡ ತಲುಪಿದಾಗ ರಾತ್ರಿ 8.30 ನಿಮಿಷ , ದಿನಕರ್ , ಧನರಾಜ್ ಮತ್ತು ಪ್ರಸನ್ನ ಮತ್ತೆ  ಗೌರಿಕುಂಡಕ್ಕೆ ಹೋಗಿ ಸ್ನಾನ  ಮಾಡಿ ಬಂದರು , ಆ ಸಮಯದಲ್ಲಿ ನಾವಿದ್ದ ವಸತಿಗೃಹದಲ್ಲಿ ಊಟ ಖಾಲಿಯಾಗಿತ್ತು. ಈಗ ಊಟಕ್ಕೆ ಹುಡುಕಾಟ ಶುರುವಾಯಿತು. ಆ ಸಮಯದಲ್ಲಿ ಎಲ್ಲಾ ಹೋಟೆಲ್ ಗಳು ಮುಚ್ಚಿದ್ದವು ಒಂದು ಹೋಟೆಲ್ ಆಗ ತಾನೆ ಮುಚ್ಚುತ್ತಿದ್ದರು ಅವರು ಊಟ ರೆಡಿ ಮಾಡಿ ಕೊಡಲು ಒಪ್ಪಿದರು , ಮುಂದಿನ 20 ನಿಮಿಷದಲ್ಲಿ ನಮಗಾಗಿ ಬಿಸಿ ಬಿಸಿ ಚಪಾತಿ + ದಾಲ್  ರೆಡಿ ಮಾಡಿ ಕೊಟ್ಟರು.

 ಇಲ್ಲಿಗೆ ನಮ್ಮ ಮರೆಯಲಾರದ ಕೇದಾರನಾಥ ಯಾತ್ರೆ ಮುಗಿದಿತ್ತು ಯೋಜನೆ ಪ್ರಕಾರ ನಾಳೆ ನಮ್ಮ ಪ್ರಯಾಣ ಬದರೀನಾಥ ಕಡೆಗೆ , ಬೆಳಗ್ಗೆ 5.30ರ ಬಸ್ಸಿಗೆ  ಹೋಗುವುದೆಂದು ತೀರ್ಮಾನಿಸಿ ನಿದ್ದೆಗೆ ಜಾರಿದೆವು.

1 comment:

  1. So deeply explained. Felt Like we are also travelling. Thanks for sharing your wonderful experience.
    May I know the total expensive sir? And who was your inspiration to travel to Kedarnath and Bhadrinath.

    ReplyDelete