ಶಿವಗಂಗಾ ಜಲಪಾತ

 Shivaganga is a beautiful waterfall located in an area of thick forest on the river Sonda in Sirsi , around 35 Kms from Sirsi .


ರುದ್ರ ರಮಣೀಯ ಶಿವಗಂಗಾ ಜಲಪಾತ

ಶಿವಗಂಗಾ ಜಲಪಾತದಲ್ಲಿ ಶಾಲ್ಮಲೆ ಸುಮಾರು 359 ಅಡಿ ಎತ್ತರದಿಂದ ಬಾಗುತ್ತ, ಬಳುಕುತ್ತಾ 3ಹಂತದ ಜಲಧಾರೆಯಾಗಿ ಧುಮುಕಿ ಕಣಿವೆಗೆ ಇಳಿಯುತ್ತಾಳೆ. ಸುಂದರ ಹಾಲ್ನೊರೆಯ ದೃಶ್ಯ ಬೇಸಿಗೆಯಲ್ಲಿ ಗೋಚರಿಸಿದರೆ, ಮಳೆಯ ಕೆನ್ನೀರು ಧುಮ್ಮಿಕ್ಕುವ ನೋಟ ಕಣ್ಣು ತುಂಬುತ್ತದೆ.

ಎರಡು ಶಿಲಾ ರಚನೆಯ ಅದ್ಭುತ ಪದರಗಳ ಮಧ್ಯೆ ಸಾಗುವ ಈ ಜಲಪಾತ ತನ್ನ ಪ್ರತಿ ಹಂತದ ತಳಭಾಗ ತಲುಪುವ ಚಪಲವನ್ನು ಪ್ರವಾಸಿಗನ ಮನದಲ್ಲಿ ಮೂಡಿಸುತ್ತದೆ. ನದಿ ತಟದ ಮುಖಾಂತರ ಕಡಿದಾದ ಶಿಲಾ ಭಾಗವನ್ನು ಏರುತ್ತಾ ಜಲಪಾತದ ನೀರ ಹನಿಗಳ ಆನಂದ ಪಡೆಯುವಾಸೆ ಮೂಡುವುದು ಸಹಜ. ಆದರೆ ಇದು ಅಪಾಯಕಾರಿ. ಎಂಥ ತಜ್ಞ ಸಾಹಸಿಯನ್ನು ಕಂಗೆಡಿಸ ಬಲ್ಲ ಪೃಕೃತಿ ಸೋಜಿಗ ಶಿವಗಂಗಾ ಜಲಪಾತ.

ಶಾಂತವಾಗಿ ಹುಡುಗಾಟಕ್ಕೆ ತೊಡಗದೆ, ದೈಹಿಕ ಸಮತೋಲನ ಮತ್ತು ಸಹಜವಾದ ರೀತಿಯಿಂದ ದಡದಲ್ಲಿನ ಸುರಕ್ಷಿತ ಶಿಲೆಗಳ ಮೇಲೆ ಕುಳಿತು ಹವ್ಯಾಸಿ ಮೀನುಗಾರಿಕೆ ನಡೆಸುತ್ತ ಆನಂದಿಸಬಹುದು. ಹೊತ್ತು ತಂದ ಬುತ್ತಿ ತಿನ್ನಬಹುದು.

ಜಲಪಾತದ ಪ್ರತಿ ಹಂತದ ಮುಂದಿನ ಶಾಂತ ಶಾಲ್ಮಲೆಯ ಒಡಲಲ್ಲಿ ಅಡಗಿದೆ ರುದ್ರತೆಯ ರಹಸ್ಯ. ಅದೇ ಆಳದ ನೀರ ಸುಳಿವಿನಿಂದ ಕೂಡಿದ ಶಿಲಾ ಪದರದ ಮಧ್ಯೆ ಅವಿತಿರುವ ಮೂರು ಗುಂಡಿಗಳೆನ್ನಿ ಅಥವಾ ಮಡುವು ಎನ್ನಬಹುದಾದ ಸ್ಥಾನಗಳು. ಶಾಲ್ಮಲೆಯ ಸೊಬಗು ಜಲಧಾರೆಯಲ್ಲಿ ಅದ್ಭುತವಾಗಿ ಗೋಚರಿಸಿದರೆ, ನದಿಯ ಪಾತ್ರ ತಲುಪಿದವರಿಗೆ ಬೇಸಿಗೆಯ ದಿನದಲ್ಲಿ ಜುಳು ಜುಳು ಹರಿವ ಸ್ವಚ್ಛ ನೀರು ಸಾಹಸಕ್ಕೆ ಕೈಬೀಸುತ್ತದೆ, ತನ್ನೊಡಲ ಭಯಾನಕತೆಯ ಮುಚ್ಚಿಟ್ಟು. ನೀರ ಮೋಹಕತೆಗೆ ಮರುಳಾಗಿ ಈಸಲೆಂದೋ, ಪಕ್ಕದ ಶಿಲಾ ಪದರದಿಂದ ಡೈವ ಹೊಡೆಯುವ ಅಥವಾ ನೀರಾಟಕ್ಕೆಂದು ಇಳಿದರೆ, ಹಿಂದೆ ಇತಿಹಾಸದ ಪುಟ ಸೇರಿದ ಘಟನೆಗಳ ಪುನರಾವರ್ತನೆ ಸಂಭವವೇ ಹೆಚ್ಚು.

ಈ ಜಲಪಾತದ ಕಣಿವೆಯ ನದಿಯ ಹರಿವ ಪಾತ್ರದ ತನಕ ತಲುಪುವ ಮಾರ್ಗ ಕಡಿದಾದ ಮಲೆನಾಡ ಅರಣ್ಯ ಹಾದಿಯಲ್ಲಿ ಇಳಿಯುತ್ತ ಸಾಗಬೇಕು. ಇದು ಪ್ರಯಾಸದ ದಾರಿಯಾದ್ದರಿಂದ ಎಚ್ಚರಿಕೆ ಅಗತ್ಯ. ಎಚ್ಚರಿಕೆ ಫಲಕಗಳು ಜಲಪಾತದಲ್ಲಿನ 3 ಭಯಾನಕ ಗುಂಡಿಗಳ ಮಾಹಿತಿ ನೀಡುತ್ತವೆ. ದೊರೆತ ಮಾಹಿತಿಯಂತೆ ಜಲಪಾತದ 3 ಹಂತದಲ್ಲಿ ತಲಾ ಒಂದರಂತೆ ಇರುವ ಈ ಗುಂಡಿಗಳು ಒಂದಕ್ಕಿಂತ ಒಂದು ಆಳವಾಗಿದ್ದು ಇದರ ಒಳಭಾಗದಲ್ಲಿ ನೀರ ರಭಸಕ್ಕೆ ಕಲ್ಲಿನ ಪದರ ಕೊರೆದು ಪೊಟರೆಗಳು ಉಂಟಾಗಿವೆ.

















No comments:

Post a Comment