ಉಳವಿ ಕ್ಷೇತ್ರ

 ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪ ತಾಲ್ಲೂಕಿನ ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಿದೆ. ಇದು ಕಾರವಾರದಿಂದ ಸುಮಾರು 75 ಕಿ.ಮೀ.ದೂರದಲ್ಲಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.

12ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ಮೇಲೆ ವೀರಶೈವರು ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು.  ವಲಸೆ ಬಂದ ಶರಣರ ಮಾರ್ಗದರ್ಶಿಗಳಾಗಿ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶರಣರೂ ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ವೀರಶೈವ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಧರ್ಮಪ್ರಚಾರ ಕೈಕೊಳ್ಳಲಾಯಿತು. ಚೆನ್ನಬಸವಣ್ಣನವರು  ಇಲ್ಲಿ ಲಿಂಗೈಕ್ಯರದರು. 

ಉಳವಿಯ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಕಲ್ಯಾಣ ಕ್ರಾಂತಿಯ ಬಳಿಕ ವಚನಗಳನ್ನು ಸಮಾಜಕ್ಕೆ ಸಾರುತ್ತ ಸಂಚಾರ ಕೈಗೊಂಡ ಚನ್ನಬಸವಣ್ಣನವರು ಕೊನೆಗೆ ಉಳವಿಗೆ ಬಂದು ಅನುಷ್ಠಾನ ನಡೆಸಿದರು. ಬಳಿಕ ಅಲ್ಲಿಯೇ ನಿರ್ವಿಕಲ್ಪ ಸಮಾಧಿ ಹೊಂದಿದರು ಎಂಬ ಐತಿಹ್ಯವಿದೆ.

ಕೇವಲ ಧಾರ್ಮಿಕ ದೃಷ್ಟಿಯಿಂದಲ್ಲದೆ ಈ ಕ್ಷೇತ್ರವು ತನ್ನಲ್ಲಿರುವ ಅದ್ಭುತ ಪ್ರಕೃತಿ ಸೌಂದರ್ಯದಿಂದಾಗಿಯೂ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿದೆ. ಪಶ್ಚಿಮ ಘಟ್ಟಗಳ ಸುಂದರ ವನ್ಯ ಸಂಪತ್ತಿನಲ್ಲಿ ನೆಲೆಸಿರುವ ಈ ತಾಣವು ಆಕರ್ಷಕ ಗುಹೆಗಳು ಹಾಗು ನೀರ್ಗೋಲುಗಳಿಂದ ಕಂಗೊಳಿಸುತ್ತದೆ.

ತಲುಪುವ ಬಗೆ:

ದಾಂಡೇಲಿಯಿಂದ ಕಾಳಿ ನದಿಯನ್ನು ದಾಟುವುದರ ಮೂಲಕ ಉಳವಿಗೆ ಭೇಟಿ ನೀಡಬಹುದು. ದಾಂಡೇಲಿಯಿಂದ 11 ಕಿ.ಮೀ ಚಲಿಸಿದನಂತರ ಪಟೋಲಿ ಕ್ರಾಸ್ ಸಿಗುತ್ತದೆ. ಈ ಕ್ರಾಸ್ ನಿಂದ ಉಳವಿಗೆ ತೆರಳಲು ಎರಡು ಆಯ್ಕೆಗಳಿವೆ. ಮೊದಲನೆಯದು ಸಾಮಾನ್ಯವಾದ ಕುಂಬಾರವಾಡಾ ಹಾಗು ಜೋಯಿಡಾದ ಮುಲಕ. ಎರಡನೆಯದು ರೋಮಾಂಚನಕಾರಿ ಅನುಭೂತಿ ನೀಡುವ ಗೂಂಧ್ ಹಾಗು ಸಿಂಥೇರಿ ಬಂಡೆಗಳ ಮೂಲಕ. ಎರಡು ಮಾರ್ಗವು ಅತ್ಯುತ್ಸಾಹದ ಮಾರ್ಗವಾಗಿದ್ದು ಹಲವು ಪ್ರಾಕೃತಿಕ ವಿಶೇಷತೆಗಳನ್ನು ಕಾಣುತ್ತ ಸಾಗಬಹುದು. ಈ ಪ್ರಯಾಣವು ಸದಾ ನೆನಪಿನಳ್ಳುಳಿಯುವ ಪ್ರವಾಸವಾಗಿದೆ.













No comments:

Post a Comment