ಕಳೆದ ಕೆಲವು ತಿಂಗಳಿನಿಂದ ಚಾರಣ ಮಾಡಿರಲಿಲ್ಲ , ಆಗಸ್ಟ್ ನಲ್ಲಿ ಜಲಪಾತಗಳಿಗೆ ಚಾರಣ ಕೈಗೊಳ್ಳುವುದು ಒಂದು ಸುಂದರ ಅನುಭವ . ಆಗಸ್ಟ್ 13, 14 ಮತ್ತು 15 ಸಾಲಾಗಿ ರಜಾ ಇದ್ದಿದ್ದರಿಂದ ನಾನು ಮತ್ತು ದಿನಕರ್ ಪ್ರವಾಸ ಹೋಗುವುದೆಂದು ತೀರ್ಮಾನಿಸಿದೆವು. ನನ್ನ ಚಾರಣ ಪಟ್ಟಿಯಲ್ಲಿದ್ದ ಜಲಪಾತಗಳಿಂದ 2 ಜಲಪಾತಗಳನ್ನು ಆಯ್ಕೆ ಮಾಡಿದೆ ಒಂದು ಅನಡ್ಕ ಜಲಪಾತ ಮತ್ತು ಇನ್ನೊಂದು ಎರ್ಮಾಯಿ ಜಲಪಾತ . ಈ ಜಲಪಾತಗಳು ಧರ್ಮಸ್ಥಳದಿಂದ ಕೇವಲ 30 ಕಿ.ಮೀ ದೂರದಲ್ಲಿವೆ , ಮೊದಲ ದಿನ ಧರ್ಮಸ್ಥಳಕ್ಕೆ ಬೇಟಿ ನೀಡಿ ನಂತರ ಜಲಪಾತಕ್ಕೆ ಚಾರಣ ಮಾಡುವುದಾಗಿ ಯೋಜನೆ ರೆಡಿಯಾಯಿತು ಇದಕ್ಕೆ ದಿನಕರ್ ಇನ್ನೊಂದು ಹೊಸ ಚಾರಣ ಸ್ಥಳವನ್ನು ಸೇರಿಸಿದ ಅದುವೇ ಕೊನಾಜೆ ಕಲ್ಲು. ಅಂತಿಮ ಯೋಜನೆ ಈ ರೀತಿ ಇತ್ತು
ಬೆಂಗಳೂರಿನಿಂದ - ಧರ್ಮಸ್ಥಳ - ಕೊನಾಜೆ ಕಲ್ಲು - ಧರ್ಮಸ್ಥಳ - ಅನಡ್ಕ ಜಲಪಾತ - ಎರ್ಮಾಯಿ ಜಲಪಾತ- ಸುಬ್ರಮಣ್ಯ -ಬೆಂಗಳೂರು
ಮೊದಲು ರೈಲಿನಲ್ಲಿ ಸುಬ್ರಮಣ್ಯಕ್ಕೆ ಹೋಗುವುದೆಂದು ತೀರ್ಮಾನಿಸಿದ್ದೆವು ಆದರೆ ತತ್ಕಾಲ್ ನಲ್ಲಿ ಟಿಕೆಟ್ ಸಿಗಲಿಲ್ಲ, ಅಂತಿಮವಾಗಿ ಸಿಕ್ಕಿದ್ದು ಕರ್ನಾಟಕ ಸಾರಿಗೆ ಭಾಗ್ಯ(ಕೆಂಪು ಬಸ್ಸು). ಆಗಸ್ಟ್ 12ರ ರಾತ್ರಿ 9.30ರ ಬಸ್ಸಿಗೆ 2 ಟಿಕೆಟ್ ಬುಕ್ ಮಾಡಿದೆ. ಮತ್ತು ಧರ್ಮಸ್ಥಳದಲ್ಲಿ ಮುಂಗಡವಾಗಿ ಫೋನ್ ಮೂಲಕ ಕೊಠಡಿ ಕಾಯ್ದಿರಿಸಿದೆವು.
ಆಗಸ್ಟ್ 12ರ ರಾತ್ರಿ ಬಸ್ಸು ಮೆಜೆಸ್ಟಿಕ್ ನಿಲ್ದಾಣದಿಂದ ಹೊರಟಾಗ ರಾತ್ರಿ 9.50 , ದಿನಕರ್ ನವರಂಗ್ ಬಸ್ ನಿಲ್ದಾಣದಲ್ಲಿ 3 ಬ್ಯಾಗ್ ಗಳ ಜೊತೆ ಬಸ್ಸು ಹತ್ತಿದ!!ಕರ್ನಾಟಕ ಸಾರಿಗೆಯಲ್ಲಿ ರಾತ್ರಿಯ ನಿದ್ದೆ ತುಂಬಾ ಚೆನ್ನಾಗಿತ್ತು !!!! ಯೋಗಾಸನದ ಎಲ್ಲಾ ಆಸನಗಳನ್ನು ಪ್ರಯೋಗಿಸಿದ್ದೆವು. ಬೆಳಗ್ಗೆ ಬಸ್ಸು ಧರ್ಮಸ್ಥಳ ತಲುಪಿದಾಗ 6 ಗಂಟೆ.
DAY-1 (13-Aug-2016)
ಬಸ್ ನಿಲ್ದಾಣದಿಂದ ನೇರವಾಗಿ ಸಹ್ಯಾದ್ರಿ ವಸತಿ ನಿಲಯಕ್ಕೆ ಹೋಗಿ ಕಾಯ್ದಿರಿಸಿದ್ದ ಕೊಠಡಿಯನ್ನು ಪಡೆದು, ಸ್ನಾನ ಮುಗಿಸಿ ದರ್ಶನಕ್ಕೆ ಹೊರಟಾಗ ಸಮಯ ಸುಮಾರು 7.15 ದರ್ಶನಕ್ಕೆ ಸಾಲು ಕಡಿಮೆ ಇತ್ತು. 45 ನಿಮಿಷಗಳಲ್ಲಿ ದರ್ಶನ ಮುಗಿಸಿ ಪ್ರಸಾದ ತೆಗೆದುಕೊಂಡು ಹೊರಗೆ ಬಂದೆವು.
ರತ್ನಗಿರಿ ಬೆಟ್ಟಕ್ಕೆ ಮೆಟ್ಟಿಲುಗಳ ಮುಖಾಂತರ ಹೋಗದೆ ವಾಹನಗಳು ಹೋಗುವ ಡಾಂಬರು ರಸ್ತೆಯಲ್ಲಿ ನಡೆದು ಹೋದೆವು (ಇದು ದಿನಕರ್ ಸಲಹೆ)
ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮೂರ್ತಿಯ ದರ್ಶನ ಮಾಡಿ ಪೋಟೋ ಸೇಷನ್ ಮುಗಿದ ನಂತರ ಕೊಠಡಿಗೆ ತೆರಳಿ ಪ್ರಸಾದವನ್ನು ಕೊಠಡಿಯಲ್ಲಿ ಇಟ್ಟು ಉಜಿರೆಗೆ ಹೊರೆಟೆವು.
ಅಲ್ಲಿಗೆ ದಿನಕರ್ ಸ್ನೇಹಿತರಾದ ಧನರಾಜ್ ಚಿಕ್ಕಮಗಳೂರಿನಿಂದ ಬಂದು ನಮ್ಮ ಜೊತೆ ಸೇರಿಕೊಳ್ಳುವವರಿದ್ದರು. ಧನರಾಜ್ ಉಜಿರೆಗೆ ಬಂದು ಸೇರಿದಾಗ ಸಮಯ 11 ಗಂಟೆ ಯಾಗಿತ್ತು.
ಮಾಹಿತಿ : ಧರ್ಮಸ್ಥಳದಲ್ಲಿ ಮುಂಗಡವಾಗಿ ದೂರವಾಣಿ ಮೂಲಕ ಕೊಠಡಿ ಕಾಯ್ದಿರಿಸಬಹುದು . ದೂರವಾಣಿ ಸಂಖ್ಯೆ : 08256 - 277121, 277141
Test
ReplyDelete