ಅನಡ್ಕ ಜಲಪಾತಕ್ಕೆ ಇನ್ನೊಂದು ಹೆಸರು ಕಡಮಗುಂಡಿ ಜಲಪಾತ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಗ್ರಾಮದಿಂದ 4 ಕಿ.ಮೀ ದೂರದಲ್ಲಿದೆ. ದಿಡುಪೆಯಿಂದ ಈ ಜಲಪಾತಕ್ಕೆ 3 ಕಿ.ಮೀ ಕಚ್ಚಾ ರಸ್ತೆಯಿದೆ, ಈ ರಸ್ತೆಯಲ್ಲಿ ಜೀಪುಗಳಿಗೆ ಮಾತ್ರ ಓಡಾಡಲು ಸಾಧ್ಯ ಆದ್ದರಿಂದ ನಡೆದು ಕೊಂಡು ಹೋಗುವುದು ಸೂಕ್ತ. ಈ ರಸ್ತೆಯಲ್ಲಿ ನಡೆದು ಕೊಂಡು ಹೋಗುವಾಗ ಎಡಕ್ಕೆ ಕಾಣುವ ಕುದುರೆಮುಖದ ಗಿರಿ ಶಿಖರಗಳ ದೃಶ್ಯ ಅದ್ಬುತ. ಈ ಕಚ್ಚಾ ರಸ್ತೆಯ ಕೊನೆಯ ಮನೆಯವರ ಅನುಮತಿ ಪಡೆದು ಅವರ ತೋಟದಲ್ಲಿ 1/2 ಕಿ.ಮೀ ನಡೆದರೆ ಸುಂದರವಾದ ಅನಡ್ಕ ಜಲಪಾತ ಸಿಗುತ್ತದೆ.
DAY 2 (14 Aug 2016)
ಬೆಳಗ್ಗೆ 5.30 ಕ್ಕೆ ಎದ್ದು ಸ್ನಾನ ಮುಗಿಸಿ ಎಲ್ಲರೂ ರೆಡಿಯಾಗಿ ಸಹ್ಯಾದ್ರಿಯ ಕೊಠಡಿ ಖಾಲಿ ಮಾಡಿ ಬ್ಯಾಗ್ ಗಳೊಂದಿಗೆ ಉಜಿರೆ ತಲುಪಿದಾಗ ಸಮಯ 7.00 ಗಂಟೆ. ದಿಡುಪೆಗೆ ಮೊದಲ ಬಸ್ 7.30ಕ್ಕೆ, ಹೋಟೆಲ್ ನಲ್ಲಿ ಉಪಹಾರ ಮುಗಿಸಿ ಮದ್ಯಾಹ್ನಕ್ಕೆ ಪಲಾವ್ ಪಾರ್ಸಲ್ ಮಾಡಿಸಿಕೊಂಡೆವು ಮತ್ತು ಜಿಗಣೆಗಳಿಂದ ರಕ್ಷಣೆ ಪಡೆಯಲು ಉಪ್ಪು, ನಶ್ಯ ಮತ್ತು ಕೊಬ್ಬರಿ ಎಣ್ಣೆ ಖರೀದಿಸಿದೆವು. ದಿನಕರ್ ಪ್ರಯತ್ನದಿಂದ ನಮ್ಮಲ್ಲಿದ್ದ ಲಗೇಜ್ ಬ್ಯಾಗ್ ಗಳನ್ನು ಹೋಟೆಲ್ ಕಾಮದೇನುವಿನಲ್ಲಿ ಇಡಲು ಅವಕಾಶ ದೊರೆಯಿತು. ಬ್ಯಾಗ್ ಹೋಟೆಲಿನಲ್ಲಿ ಇಟ್ಟು ಬಸ್ ನಿಲ್ದಾಣಕ್ಕೆ ಬಂದಾಗ ಸಮಯ 7.30 ಬಸ್ ಇನ್ನು ಬಂದಿರಲಿಲ್ಲ , ದಿಡುಪೆ ಬಸ್ ಬಂದಾಗ ಸಮಯ 7.50. ಸುಮಾರು ಅರ್ಧ ಗಂಟೆ ಪ್ರಯಾಣದ ನಂತರ ಬಸ್ ಕೊನೆಯ ನಿಲ್ದಾಣ ದಿಡುಪೆಯ ಹೋಟೆಲ್ ಒಂದರ ಮುಂದೆ ನಿಂತಿತು. ಅರಣ್ಯ ಇಲಾಖೆಯ ರಾಜು ರವರು ಇಲ್ಲೆ ಅಂಗಡಿಯಲ್ಲಿ ಇರುತ್ತಾರೆ ಎಂದು ಚಾಲಕರು ತಿಳಿಸಿದರು. ನಾವು ಬಸ್ಸಿನಿಂದ ಇಳಿದು ಅರಣ್ಯ ಇಲಾಖೆಯವರ ಬಳಿ ಹೋದಾಗ ತಿಳಿಯಿತು ಅರಣ್ಯ ಇಲಾಖೆಯ ರಾಜುರವರು ದಿನಕರನ ಸಹಪಾಠಿಗಳು. ನಮ್ಮ ಅರ್ಧ ಕೆಲಸ ಸುಲಭವಾಯಿತು ಏಕೆಂದರೆ ಈ ಜಲಪಾತಕ್ಕೆ ಹೋಗಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿತ್ತು. ರಾಜುರವರು ಅತ್ಯಂತ ಉತ್ಸಾಹದಿಂದ ನಮಗೆ ಜಲಪಾತಕ್ಕೆ ಹೋಗುವ ಮಾರ್ಗದ ಬಗ್ಗೆ ವಿವರಿಸಿ ಒಂದು ನಕ್ಷೆ ಬರೆದು ಕೊಟ್ಟರು.ರಾಜುರವರಿಂದ ನಕ್ಷೆ ಪಡೆದು ಪಕ್ಕದಲ್ಲಿದ್ದ ಹೋಟಲಿನಲ್ಲಿ ಟೀ ಕುಡಿದು ಚಾರಣ ಶುರು ಮಾಡಿದೆವು. ಮುಖ್ಯರಸ್ತೆಯಿಂದ 3 ಕಿ.ಮೀ ವರೆಗೂ ಕಚ್ಚಾ ರಸ್ತೆಯಿದೆ, ಆದರೆ ಈ ರಸ್ತೆಯಲ್ಲಿ ಜೀಪುಗಳು ಕೂಡ ಹೋಗುವುದು ಕಷ್ಟ.
ಮದ್ಯೆ ಸಾಕಷ್ಟು ತಿರುವುಗಳು ಇದ್ದವು ಆದರೆ ರಾಜು ಬರೆದು ಕೊಟ್ಟಿದ್ದ ನಕ್ಷೆ ಇದ್ದದ್ದರಿಂದ ಯಾವುದೇ ಅನುಮಾನ ಇಲ್ಲದೆ ಅವರು ತಿಳಿಸಿದ್ದ ಜೋಡಿ ಮನೆ ತಲುಪಿದೆವು. ಈ ಜಲಪಾತಕ್ಕೆ ಅವರ ಮನೆಯ ತೋಟದ ಮುಖಾಂತರ ಹೋಗಬೇಕಾಗಿತ್ತು, ಮೊದಲು ಮನೆಯವರು ಅನುಮತಿ ಕೊಡಲು ನಿರಾಕರಿಸಿದರು ನಂತರ ರಾಜುರವರ ಹೆಸರು ಹೇಳಿದ ಮೇಲೆ ಅನುಮತಿ ಕೊಟ್ಟು ಸ್ವಲ್ಪ ದೂರದವರೆಗೂ ದಾರಿ ತೋರಿಸಲು ಅವರ ಮಗನನ್ನು ಜೊತೆಯಲ್ಲಿ ಕಳುಹಿಸಿದರು.ಆ ಹುಡುಗನು ಸ್ವಲ್ಪ ದೂರ ಬಂದು ಮುಂದೆ ಕಾಣುವ ಕಾಲುದಾರಿಯಲ್ಲಿ ಹೋಗಬೇಕೆಂದು ತಿಳಿಸಿ ಹಿಂದಿರುಗಿದನು.
ಇಲ್ಲಿಂದ ಜಿಗಣೆಗಳ ಹಾವಳಿ ಶುರುವಾಯಿತು. ನಾವು ತಂದಿದ್ದ ಶಸ್ತ್ರಾಸ್ತ್ರಗಳನ್ನು (ಉಪ್ಪು ಮತ್ತು ನಶ್ಯದ ಪುಡಿ) ಕಾಲಿಗೆ ಹಚಿಕೊಂಡೆವು. ಸಲ್ಪ ದೂರ ನಡೆದ ಮೇಲೆ ಒಂದು ದೊಡ್ಡ ನೀರಿನ ತೊರೆ (ನೀರು ಮಂಡಿವರೆಗೂ ಇತ್ತು) ದಾಟಿದೆವು
ದಾಟಿದ ತಕ್ಷಣ ಎದುರಿಗೆ ಪ್ರತ್ಯಕ್ಷವಾದದ್ದು ಸುಂದರ ಜಲಪಾತ, ಸುಮಾರು 100 ಅಡಿಗಳ ಎತ್ತರದಿಂದ ರಭಸದಿಂದ ಧುಮುಕುತ್ತಿದ್ದ ನೀರ ಧಾರೆ ಆ ಸ್ಥಳದಿಂದ ಕಣ್ಣ ದೃಷ್ಠಿ ಕದಲದಂತೆ ಮಾಡಿತ್ತು.
ಬಂಡೆಗಳು ತುಂಬಾ ಜಾರುತ್ತಿದ್ದವು ನಿಧಾನವಾಗಿ ಜಲಪಾತದ ಹತ್ತಿರ ಬರುವ ಹೊತ್ತಿಗೆ ಜಲಪಾತದಿಂದ ಹಾರಿ ಬಂದ ಹನಿಗಳು ನಮ್ಮನ್ನೆಲ್ಲ ಒದ್ದೆ ಮಾಡಿತ್ತು . ಜಲಪಾತದ ನೇರ ಕೆಳಕ್ಕೆ ಹೋದೆವು, ಮೈ ಕೈಗಳಿಗೆ ಮಸಾಜ್ ಮಾಡಿದ ಅನುಭವವಾಯಿತು, ಜಲಪಾತ ನೀರಿನಲ್ಲಿ ಮಿಂದೆದ್ದು ಕ್ಯಾಮರಾಗೆ ಫೋಸ್ ಕೊಟ್ಟೆವು.
ಅಷ್ಟೊತ್ತಿಗೆ ಹೊಟ್ಟೆ ಖಾಲಿಯಾಗಿತ್ತು , ಉಜಿರೆಯಿಂದ ತಂದಿದ್ದ ಪಲಾವ್ ಮತ್ತು ಚಿಪ್ಸ್ ನ್ನು ಬಂಡೆಗಳ ಮೇಲೆ ನಿಂತು ತಿಂದು ಮುಗಿಸಿದೆವು. ಸಮಯ ಆಗಲೇ 12 ಗಂಟೆಯಾಗಿತ್ತು , ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರೆಟೆವು ಬರುವಾಗ ತೋಟದ ಮನೆಯವರಿಗೆ ತಿಳಿಸಿ ಮತ್ತೆ ಅದೇ ಕಚ್ಚಾ ರಸ್ತೆಯಲ್ಲಿ 3 ಕಿ.ಮೀ ನಡೆದು ದಿಡುಪೆಯ ಹೋಟೆಲ್ ಗೆ ಬಂದಾಗ ಸಮಯ 1 ಗಂಟೆ
.ಆಗ ತಾನೆ ಬಸ್ಸು ದಿಡುಪೆಗೆ ಬಂದು ನಿಂತಿತ್ತು, ಚಾಲಕರು ಮತ್ತು ನಿರ್ವಾಹಕರು ಹೋಟೆಲಿನಲ್ಲಿ ಊಟಕ್ಕೆ ಕುಳಿತ್ತಿದ್ದರು, ನಾವು ಮತ್ತೊಂದು ಸುತ್ತು ಊಟ ಮಾಡಿದೆವು (ಊಟದ ಮೆನು : ಕುಸುಲಕ್ಕಿ ಅನ್ನ ಜೊತೆ ಸಿಗಡಿ ಮೀನು ಸಾರು ಜೊತೆಗೆ ಆಮ್ಲೆಟ್). ನನ್ನದು ಶುದ್ದ ಸಸ್ಯಹಾರಿ ಮೆನು. ಅಷ್ಟರಲ್ಲಿ ಚಾಲಕರ ಊಟವು ಮುಗಿದಿತ್ತು ಬಸ್ಸು ಉಜಿರೆ ಕಡೆಗೆ ಹೊರಟಿತು ನಾವು ಮುಂದೆ ಕಾಜೂರಿನಲ್ಲಿ ಇಳಿದು ಕೊಂಡೆವು.
"ನಮ್ಮ ಮುಂದಿನ ಪಯಣ ಎರ್ಮಾಯಿ ಜಲಪಾತಕ್ಕೆ"
ವಿನಂತಿ : ಯಾವುದೇ ಪ್ರಕೃತಿ ಪ್ರವಾಸಿ ತಾಣಗಳಿಗೆ ಹೋದಾಗ ಉಪಯೋಗಿಸಿದ ಪ್ಲಾಸ್ಟಿಕ್ ಕವರನ್ನು ಅಲ್ಲೆ ಬಿಡದೆ ತಮ್ಮ ಜೊತೆಯಲ್ಲಿ ತರುವುದರಿಂದ ಪ್ರಕೃತಿಯ ಸೌಂದರ್ಯ ಹಾಗೆ ಉಳಿಯುತ್ತದೆ.
ಮಾರ್ಗಸೂಚಿ : ದಿಡುಪೆಯ ಹೋಟೆಲ್ ಪಕ್ಕದ ಕಚ್ಚಾ ರಸ್ತೆಯಲ್ಲಿ ಹೊಗುವಾಗ ಮೊದಲು ಒಂದು ಚಿಕ್ಕ ಸೇತುವೆ ಸಿಗುತ್ತದೆ ನಂತರ ಸಲ್ಪ ದೂರ ಸಿಮೆಂಟ್ ರಸ್ತೆ ಸಿಗುತ್ತದೆ ನಂತರ ಮತ್ತೊಂದು ಸೇತುವೆ ನಂತರ ಮತ್ತೆ ಸಿಮೆಂಟ್ ರಸ್ತೆ ಸಿಗುತ್ತದೆ ಸಿಮೆಂಟ್ ರಸ್ತೆ ಮುಗಿದ ಮೇಲೆ ಎಡಕ್ಕೆ ಒಂದು ವಿದ್ಯುತ್ ಕಂಬ ಸಿಗುತ್ತದೆ ಅದರ ಮೇಲೆ ಜಲಪಾತಕ್ಕೆ ದಾರಿ ಎಂದು ಬರದಿದೆ ಈ ರಸ್ತೆಯಲ್ಲಿ 10 ನಿಮಿಷ ಮುಂದುವರೆದರೆ ಎಡಕ್ಕೆ ಒಂದು ಮನೆ ಮುಂದೆ ಸಿಮೆಂಟ್ ಟ್ಯಾಂಕ್ ಇದೆ , ಈ ಮನೆಯ ವಿರುದ್ದ ದಿಕ್ಕಿನಲ್ಲಿ ಇನ್ನೊಂದು ಮನೆ ಇದೆ , ಈ ಮನೆಯವರ ತೋಟದ ಕಾಲು ದಾರಿ ನೇರ ಜಲಪಾತಕ್ಕೆ ಸಾಗುತ್ತದೆ. (ಕಚ್ಚಾ ರಸ್ತೆಯಲ್ಲಿ ಸುಮಾರು ತಿರುವಗಳು ಸಿಗುತ್ತವೆ ಆದರೆ ಮುಖ್ಯರಸ್ತೆಯಲ್ಲಿಯೆ ಸಾಗಬೇಕು)
No comments:
Post a Comment